ಗೋಣಿಕೊಪ್ಪ ವರದಿ, ಅ. 18: ಬಾಳಾಜಿ ಗ್ರಾಮದಲ್ಲಿರುವ ಮಾನಿಲ್ ಅಯ್ಯಪ್ಪ ದೇವರಕಾಡು ಒತ್ತಿನಲ್ಲಿ ಕಾಫಿ ಬೆಳೆಗಾರ ಕಾಡ್ಯಮಾಡ ಗೌತಮ್ ಅವರಿಗೆ ಸೇರಿದ ಕಾಫಿತೋಟವಿತ್ತು. ಇದನ್ನು ಬಡಾವಣೆಯಾಗಿ ಪರಿವರ್ತಿಸಲಾಗುತ್ತಿದ್ದು, ಸರ್ವೇ ಸಂದರ್ಭ ದೇವರಕಾಡು ಬಡಾವಣೆ ಯೋಜನಾ ನಿರ್ಮಿತ ಜಾಗಕ್ಕೆ ಸೇರಿರುವ, ಸುಮಾರು 2 ಎಕರೆ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಅರಣ್ಯ ಇಲಾಖೆ ಆ ಜಾಗಕ್ಕೆ ಬೇಲಿ ಹಾಕಿ ರಕ್ಷಣೆಗೆ ಕ್ರಮಕೈಗೊಂಡಿದೆ. ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಸದಸ್ಯರು ಕೂಡ ಇಲಾಖೆಗೆ ಬೆನ್ನೆಲುಬಾಗಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದೆ.

ಪರಿಸರ ಪ್ರೇಮಕ್ಕೆ ಜನರಿಂದ ಹೆಮ್ಮೆಯ ಮಾತುಗಳು ವ್ಯಕ್ತಗೊಳ್ಳುತ್ತಿದ್ದು, ಇದೇ ರೀತಿ ದೇವರಕಾಡು ವ್ಯಾಪ್ತಿಯಲ್ಲಿನ ಅತಿಕ್ರಮಿತ ಪ್ರದೇಶವನ್ನು ಆಕ್ರಮಿತರು ಬಿಟ್ಟುಕೊಡುವಂತಾಗಬೇಕು ಎಂಬ ಒತ್ತಾಯ ಹೆಚ್ಚಾಗುತ್ತಿದೆ.

ಬಾಳಾಜಿ ಗ್ರಾಮದಲ್ಲಿರುವ ಸರ್ವೇ ನಂಬರ್ 11 ರಲ್ಲಿ ಸುಮಾರು 61.56 ಎಕ್ರೆ ಮಾನಿಲ್ ಅಯ್ಯಪ್ಪ ದೇವರಕಾಡು ಹೆಸರಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ಪ್ರದೇಶವಿದೆ. ಇದರಲ್ಲಿ 4.5 ಎಕರೆ ಜಾಗದಲ್ಲಿ ಭದ್ರಕಾಳಿ, ಬೋಟೆಕಾರ ಅಯ್ಯಪ್ಪ, ಮಾನಿಲ್ ಅಯ್ಯಪ್ಪ ದೇವರ ಸ್ಥಾನವಿರುವದರಿಂದ ಸಂರಕ್ಷಿಸಲ್ಪಟ್ಟಿದೆ. ಉಳಿದ ಜಾಗ ಅತಿಕ್ರಮಣವಾಗಿದೆ. ವಸತಿ, ತೋಟವಾಗಿ ಪರಿವರ್ತಿಸಲಾಗಿದೆ. ಇಲ್ಲಿ ಅರಣ್ಯೇತರ ಚಟುವಟಿಕೆ ತಡೆಹಿಡಿಯಬೇಕು ಎಂದು ಗ್ರಾಮಸ್ಥರು ಹೋರಾಟ ನಡೆಸುತ್ತಾ ಬಂದಿದ್ದಾರೆ.

ಇದರಂತೆ 2019 ರಲ್ಲಿ ವೀರಾಜಪೇಟೆ ಹಿರಿಯ ನ್ಯಾಯಾದೀಶ ಜಯಪ್ರಕಾಶ್ ತೀರ್ಪು ನೀಡಿ, ಸೇವಾ ಸಮಿತಿಗೆ ಹಕ್ಕು ನೀಡಲು ಬರುವುದಿಲ್ಲ. ಆದರೆ, ಅಲ್ಲಿ ಅರಣ್ಯೇತರ ಚಟುವಟಿಕೆ ನಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ತೀರ್ಪು ನೀಡಿದ್ದರು.

ದೇವರಕಾಡು ಸಂರಕ್ಷಣೆಗಾಗಿ ಹೋರಾಟ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ದೇವರಕಾಡುವಿಗೆ ಸೇರಿರುವ ಜಾಗವನ್ನು ಮರಳಿಸಿರುವುದು ಉತ್ತಮ ಬೆಳವಣಿಗೆ ಎಂದು ಮಾನಿಲ್ ಅಯ್ಯಪ್ಪ ಸೇವಾಸಮಿತಿ ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ತಿಳಿದ ಮೇಲೆ ಸರ್ಕಾರದ ಸುಪರ್ಧಿಗೆ ನೀಡಿರುವ ಕ್ರಮ ಸೂಕ್ತ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.