ಕಣಿವೆ, ಅ.18 : ಬಸವನಹಳ್ಳಿಯಲ್ಲಿರುವ ಲ್ಯಾಂಪ್ಸ್ ಸೊಸೈಟಿಯಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ ಎಂದು ಸಂಘದ ಆಡಳಿತ ಮಂಡಳಿಯ ಹಾಲಿ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಎಸ್.ಎನ್.ರಾಜಾರಾವ್ ಸ್ಪಷ್ಟನೆ ನೀಡಿದ್ದಾರೆ. ಶನಿವಾರದ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಬಸವನಹಳ್ಳಿ ಲ್ಯಾಂಪ್ ಸೊಸೈಟಿಯಲ್ಲಿ ಹಣ ಸೋರಿಕೆಯಾಗಿದೆಯೇ ಎಂಬ ವರದಿಗೆ ಉತ್ತರಿಸಿರುವ ಅವರು, 2018-19 ರ ಸಾಲಿನ ಲೆಕ್ಕಪರಿಶೋಧನಾ ವರದಿ ಇನ್ನೂ ಕೂಡ ಪೂರ್ಣವಾಗದಿರುವಾಗ, ತನ್ನ ತೇಜೋವಧೆಗೆ ಪ್ರಯತ್ನ ಮಾಡುತ್ತಿರುವುದು ಸಮಂಜಸವಲ್ಲ ಎಂದಿದ್ದಾರೆ.

ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ, ಬಸವನಹಳ್ಳಿಯ ದಿಡ್ಡಳ್ಳಿ ಗಿರಿಜನರೂ ಸೇರಿದಂತೆ ಸೋಮವಾರಪೇಟೆ ತಾಲೂಕಿನ ಸುಮಾರು 250 ಗಿರಿಜನ ಕುಟುಂಬಗಳಿಗೆ ಅನುಕೂಲ ಒದಗಿಸುವ ಸಿದ್ದುಡುಪು ತಯಾರಿಕಾ ಘಟಕವನ್ನು ಬಸವನಹಳ್ಳಿಯ ಸಂಘದ ಬಳಿ ಸ್ಥಾಪಿಸುವ ಯೋಜನೆಯೊಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಏಕಗವಾಕ್ಷಿ ಸಭೆಯಲ್ಲಿ ಅನುಮೋದನೆಗೊಂಡಾಗ, ರೂ. 5 ಕೋಟಿ ಮೌಲ್ಯದ ಘಟಕವನ್ನು ಬಸವನಹಳ್ಳಿಗೆ ತರಲು ನಾನು ವಿಶೇಷವಾದ ಶ್ರಮ ಹಾಕಿದ್ದೇನೆ.

ರೂ. 5 ಕೋಟಿ ಅನುದಾನದ ಮಂಜೂರಾತಿಗಾಗಿ ಇಲಾಖೆಗಳ ಒಳಗೆ ಮಾಡಬೇಕಾದ ಖರ್ಚು ವೆಚ್ಚಗಳ ಬಗ್ಗೆ ಚರ್ಚಿಸಿ ಸಂಘದಲ್ಲಿದ್ದ ಹಣವನ್ನು ಖರ್ಚು ಮಾಡಲು ಸಭೆ ಸಮ್ಮತಿಸಿತ್ತು. ಅದರಂತೆಯೇ ಪಾಚಿ ಮತ್ತು ಸೀಗೆ ಖರೀದಿಗೆ ಇಟ್ಟ 6.90 ಲಕ್ಷ ರೂ ಹಣವನ್ನು ಖರ್ಚು ಮಾಡಲಾಗಿದೆ. ಜೊತೆಗೆ ಸಂಘದ ಕಟ್ಟಡದ ಮೇಲ್ಛಾವಣಿಯ ಮೇಲೆ 2.70 ಲಕ್ಷದ ಕಾಮಗಾರಿ ಮಾಡಲಾಗಿದ್ದು ಅದರ ಹಣವನ್ನು ನಾನೇ ಸ್ವತಃ ಭರಿಸಿದ್ದೇನೆ. ಅಲ್ಲದೇ 25 ಲಕ್ಷ ಅನುದಾನದ ಹೊಸ ಕಟ್ಟಡವೊಂದು ಮಂಜೂರಾತಿಗೊಂಡು ಬಂದಾಗ ಟೆಂಡರ್ ಕರೆದೇ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈ ಕಾಮಗಾರಿಗೆ ಸರ್ಕಾರದಿಂದ ಬಂದ 20 ಲಕ್ಷ ರೂ. ಅನುದಾನದ ಜೊತೆಗೆ ಉಳಿದ 4 ಲಕ್ಷ ರೂಗಳನ್ನು ನಾನೇ ಸ್ವತಃ ಕಟ್ಟಡದ ಗುತ್ತಿಗೆದಾರನಿಗೆ ನೀಡಿದ್ದೇನೆಯೇ ಹೊರತು ಸಂಘದ ಹಣವನ್ನು ಅನಗತ್ಯವಾಗಿ ಬಳಸಿಕೊಂಡಿಲ್ಲ. ಈ ಕಟ್ಟಡ ಕಾಮಗಾರಿ ನಿರ್ವಹಣೆಗೆ ಟೆಂಡರ್ ಕರೆದಾಗ ಮೂವರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಆ ಮೂವರ ಪೈಕಿ ಕಡಿಮೆ ಹಣ ನಮೂದಿಸಿದ್ದ ಅರುಣ್‍ರಾವ್ ಎಂಬವರಿಗೆ ಕಾಮಗಾರಿ ನೀಡಲಾಗಿತ್ತು. ವಿವಾಹದ ಬಳಿಕ ಕುಟುಂಬದಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸವಿರುವ ಅರುಣ್‍ರಾವ್ ನನ್ನ ಮಗನೇ ಆದರೂ ಕೂಡ ಇಲ್ಲಿ ಸಹಕಾರ ಸಂಘದ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ರಾಜರಾವ್ ವಿವರಿಸಿದ್ದಾರೆ.