ವರದಿ : ವಾಸು ಎ.ಎನ್.

ಸಿದ್ದಾಪುರ, ಅ. 16 : ಗ್ರಾ.ಪಂ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ರಾಜಕೀಯ ಚಟುವಟಿಕೆಗಳು ಹಾಗೂ ಮತ ಬೇಟೆ ಪ್ರಾರಂಭವಾಗಿದೆ. ಜಿಲ್ಲೆಯ ಅತಿದೊಡ್ಡ ಗ್ರಾ.ಪಂ ಎಂದು ಖ್ಯಾತಿ ಪಡೆದಿರುವ ಹಾಗೂ ಅತಿ ಹೆಚ್ಚು ಸದಸ್ಯರುಗಳನ್ನು ಒಳಗೊಂಡಿರುವ ಸಿದ್ದಾಪುರ ಗ್ರಾ.ಪಂ. ಚುನಾವಣೆಗೆ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿದೆ.

ಸಿದ್ದಾಪುರ ಗ್ರಾ.ಪಂ. 25 ಸದಸ್ಯರುಗಳು ಇರುವ ಪಂಚಾಯಿತಿ ಆಗಿದ್ದು, ಗ್ರಾ.ಪಂ. ವ್ಯಾಪ್ತಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈ ಬಾರಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆಸುತ್ತಿವೆ. ಈ ಹಿಂದಿನ ಆಡಳಿತ ಅವಧಿಯಲ್ಲಿ ಒಂದು ಬಾರಿ ಜೆಡಿಎಸ್ ಪಕ್ಷದ ಬೆಂಬಲಿತ ಸದಸ್ಯರುಗಳ ನೇತೃತ್ವದಲ್ಲಿ ಪಂಚಾಯಿತಿ ಆಡಳಿತ ನಡೆಸಿತ್ತು. ಉಳಿದ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನೇತೃತ್ವದಲ್ಲಿ ಪಂಚಾಯಿತಿ ಆಡಳಿತ ನಡೆದಿದೆ. ಗ್ರಾ.ಪಂ. ಚುನಾವಣೆಗಳಲ್ಲಿ ಪಕ್ಷಗಳ ಚಿಹ್ನೆಗಳು ಇಲ್ಲದಿದ್ದರೂ ಕೂಡ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ರಾಜಕೀಯ ಬಳಸುತ್ತಿದ್ದಾರೆ. ಅಲ್ಲದೇ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಾರೆ.

ಸಿದ್ದಾಪುರದ ಗ್ರಾ.ಪಂ. ಚುನಾವಣೆಯಲ್ಲಿ ಈ ಬಾರಿ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿಯಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಇದಲ್ಲದೇ ಕಳೆದ ಬಾರಿ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ ಯಾವುದೇ ಸ್ಥಾನಗಳನ್ನು ಗಳಿಸದ ಬಿಜೆಪಿ ಪಕ್ಷ ಈ ಬಾರಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸಿದ್ದಾಪುರ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿ ಪಕ್ಷದ ಮುಖಂಡರುಗಳು ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಸರತ್ತು ನಡೆಸುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಎಸ್.ಡಿ.ಪಿ.ಐ. ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪೈಕಿ ಐದು ಮಂದಿ ಪಂಚಾಯಿತಿ ಸದಸ್ಯರುಗಳಾಗಿ ಆಯ್ಕೆಗೊಂಡಿದ್ದರು. ಆದರೆ ಕಳೆದ ಬಾರಿ ಎಸ್.ಡಿ.ಪಿ.ಐ. ಬೆಂಬಲಿತ ಸದಸ್ಯರುಗಳಾಗಿದ್ದ ಅಭ್ಯರ್ಥಿಗಳು ಈ ಬಾರಿ ಪಕ್ಷದ ಬೆಂಬಲ ಪಡೆಯದೇ ಕೆಲವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಒಂದು ಕಾಲದಲ್ಲಿ ಸಿದ್ದಾಪುರದ ಗ್ರಾ.ಪಂ.ಯಲ್ಲಿ ಹಾಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಲಿಷ್ಠವಾಗಿದ್ದ ಜೆಡಿಎಸ್ ಪಕ್ಷವು ಇದೀಗ ಚೇತರಿಕೆ ಕಾಣದೇ ಪಕ್ಷದಲ್ಲೂ ಸ್ಥಳೀಯ ನಾಯಕರುಗಳಿಲ್ಲದೇ ಮೌನವಾಗಿದೆ.

ಆದರೆ ಜಿಲ್ಲಾ ಜೆಡಿಎಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೆ.ಎಂ.ಬಿ. ಗಣೇಶ್ ಅವರು ಅಧ್ಯಕ್ಷರಾದ ಬಳಿಕ ಮುಂದಿನ ಗ್ರಾ.ಪಂ. ಚುನಾವಣೆಗೆ ಅಭ್ಯರ್ಥಿಗಳನ್ನು ಸ್ಪರ್ಧಿಸಲು ತಯಾರಿ ನಡೆಸುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಬೆಟ್ಟದಷ್ಟು ಸಮಸ್ಯೆಗಳಿದ್ದು, ಈ ಹಿಂದೆ ಆಡಳಿತ ನಡೆಸಿದ ಆಡಳಿತ ಮಂಡಳಿ ಸದಸ್ಯರುಗಳು ಹಾಗೂ ಅಧ್ಯಕ್ಷರುಗಳ ನಡುವೆ ಆರೋಪ ಪ್ರತ್ಯಾರೋಪ ಮಾತಿನ ಚಕಮಕಿ ವೈಯಕ್ತಿಕ ನಿಂದನೆ ಹೆಚ್ಚಾಗಿದ್ದು, ಕಾಲಹರಣ ಮಾಡಿದ್ದಾರೆ. ಆದರೆ ಕಸದ ಸಮಸ್ಯೆ ವಿಲೇವಾರಿ ಮಾಡಲು ಸೂಕ್ತ ಜಾಗವನ್ನು ಕಂಡು ಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದಲ್ಲದೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ಬಡ ಕುಟುಂಬಗಳು ವಸತಿ ಯೋಜನೆಯಡಿಯಲ್ಲಿ ಹಣ ಲಭಿಸಬಹುದೆಂದು ತಮ್ಮ ಮನೆಗಳನ್ನು ದುರಸ್ತಿಪಡಿಸಲು ಮುಂದಾಗಿದ್ದು, ಆದರೆ ಪಂಚಾಯಿತಿ ಅನುದಾನ ಫಲಾನುಭವಿಗಳಿಗೆ ಸಮರ್ಪಕವಾಗಿ ಸಿಗದೇ ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಗ್ರಾ.ಪಂ ನೂತನ ಸದಸ್ಯರುಗಳು ಗಮನಹರಿಸಬೇಕಾಗಿದೆ.

ಸಿದ್ದಾಪುರದ ಗ್ರಾ.ಪಂ ಗೆ ಅಧಿಕ ವರಮಾನವಿದ್ದರೂ ಸಂತೆ ಮಾರುಕಟ್ಟೆ ದುರಸ್ತಿ ಮಾಡದೇ ಮಳೆಗಾಲದಲ್ಲಿ ವ್ಯಾಪಾರಿಗಳು ಕೆಸರಿನಲ್ಲೇ ವ್ಯಾಪಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಗ್ರಾ.ಪಂ ಯ ಆಡಳಿತ ಅವಧಿಯಲ್ಲಿ ನಿರೀಕ್ಷಿತ ಮೊತ್ತದಲ್ಲಿ ಅಭ್ಯರ್ಥಿ ಹೊಂದದೇ ಇರುವುದು ಗ್ರಾಮಸ್ಥರಲ್ಲಿ ನಿರಾಶೆ ಮೂಡಿದೆ. ಮುಂದಿನ ಚುನಾವಣೆಗಳಲ್ಲಿ ಆಯ್ಕೆಗೊಳ್ಳುವ ಸದಸ್ಯರುಗಳು ಸಿದ್ದಾಪುರದ ಸಮಸ್ಯೆಗಳಿಗೆ ಹಾಗೂ ಗ್ರಾಮಸ್ಥರ ಮೂಲಭೂತ ಸೌಕರ್ಯಗಳಿಗೆ ಸ್ಪಂದಿಸಲಿ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.