ಬಿಟ್ಟಂಗಾಲ, ಅ. 16: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಾಲ, ತೊತೇರಿ, ಬಾಡಗ, ಬಿಟ್ಟಂಗಾಲ ರುದ್ರುಗುಪ್ಪೆ ಗ್ರಾಮದಲ್ಲಿ ನಿರಂತರ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಫಿ, ಏಲಕ್ಕಿ, ಭತ್ತ, ತೆಂಗು, ಅಡಿಕೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ಕಾಡಾನೆ ಹಾವಳಿಯ ಬಗ್ಗೆ ಅರಣ್ಯ ಇಲಾಖೆ ದೂರು ನೀಡಿದರೆ ಯಾವುದೇ ಸ್ಪಂದನ ದೊರೆಯುತ್ತಿಲ್ಲ ಎಂದು ವಕೀಲ ಕುಪ್ಪಂಡ ರವೀಂದ್ರ ಆರೋಪಿಸಿದ್ದಾರೆ.
ಪತ್ರಿಕೆಗೆ ಲಿಖಿತ ಹೇಳಿಕೆ ನೀಡಿ ಕಳೆದ 15 ದಿನಗಳಿಂದ ಕಾಡಾನೆಗಳು ನಿರಂತರ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳನ್ನು ಸಂಪೂರ್ಣ ನಾಶ ಮಾಡುತ್ತಿವೆ. ಆನೆ ಹಾವಳಿಯ ಬಗ್ಗೆ ದೂರು ನೀಡಿದರೆ ಇಲಾಖೆ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಸರ್ಕಾರ ಕೂಡ ರೈತರ ಬೆಳೆಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಅಧಿಕಾರಿಗಳು ಆನೆ ಸತ್ತಾಗ ಸ್ಥಳ ಪರಿಶೀಲನೆ ನಡೆಸುತ್ತಾರೆ ವಿನಹ ಬೆಳೆ ನಾಶ ಆದಾಗ ಯಾವೊಂದು ಅಧಿಕಾರಿ ಸ್ಥಳಕ್ಕೆ ಆಗಮಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.