ಸೋಮವಾರಪೇಟೆ,ಅ.16: ಪ್ರಸ್ತುತ ಸನ್ನಿವೇಶದಲ್ಲಿ ಲಾಕ್‍ಡೌನ್, ಬಂದ್ ಮಾಡುವದರಿಂದ ಕೊರೊನಾ ವಿರುದ್ಧ ಗೆಲುವು ಸಾಧಿಸುವದು ಅಸಾಧ್ಯ. ಈ ಹಿನ್ನೆಲೆ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್. ದಿಂಡಲಕೊಪ್ಪ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಆರೋಗ್ಯ ಇಲಾಖೆ, ಆರಕ್ಷಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪಟ್ಟಣದಲ್ಲಿ ನಡೆಸಲಾದ ಕೊರೊನಾ ಜಾಗೃತಿ ಜಾಥಾಕ್ಕೆ, ಸ್ಥಳೀಯ ನ್ಯಾಯಾಲಯ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ವೈರಸ್‍ಗೆ ಈವರೆಗೆ ಯಾವದೇ ಲಸಿಕೆ ಸಿದ್ಧಗೊಂಡಿಲ್ಲ. ಆದರೆ ದಿನದಿಂದ ದಿನಕ್ಕೆ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಕೇವಲ ಒಂದೆರಡು ದಿನಗಳ ಕಾಲ ಮನೆಯನ್ನು ಬಂದ್ ಮಾಡಿಕೊಂಡು ಕುಳಿತರೆ ಕೊರೊನಾ ವೈರಸ್ ವಿರುದ್ಧ ಗೆಲುವು ಸಾಧಿಸುವದು ಅಸಾಧ್ಯ. ಈ ಹಿನ್ನೆಲೆ ಪ್ರತಿಯೋರ್ವರೂ ತಮ್ಮ ದೈನಂದಿನ ಚಟುವಟಿಕೆಗಳಲ್ಲೇ ಕೊರೊನಾದಿಂದ ದೂರ ಉಳಿಯುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದರು.
ಈ ಸಂದರ್ಭ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ, ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ, ಹಿರಿಯ ವಕೀಲರಾದ ಕೆ.ಎಸ್. ಪದ್ಮನಾಭ್, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಠಾಣಾಧಿಕಾರಿ ವಿರೂಪಾಕ್ಷ, ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಸುಪರ್ಣಾ ಕೃಷ್ಣಾನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಂತರ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾ ಪಟ್ಟಣದಲ್ಲಿ ನಡೆಯಿತು. ವಕೀಲರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಪಟ್ಟಣದಲ್ಲಿ ಜಾಥಾ ನಡೆಸುವ ಮೂಲಕ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.