ತ್ರಿಪುರದ ಕೊನೆಯ ರಾಜ ಪ್ರದ್ಯೋತ್ ದೇಬ್ ವರ್ಮಾ. ಇತ್ತೀಚೆಗೆ ಇಲ್ಲಿಯ ನಿವಾಸಿಗಳು ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ಹಳ್ಳಿಗರು ಜೀವನೋಪಾಯಕ್ಕೆ ವ್ಯವಸಾಯ ಮತ್ತು ಗುಡಿ ಕೈಗಾರಿಕೆಗಳನ್ನು ಅವಲಂಭಿಸಿದ್ದಾರೆ. ಬಿದಿರಿನ ನಾನಾ ರೀತಿಯ ವಸ್ತುಗಳನ್ನು ತಯಾರಿಸು ತ್ತಾರೆ. ಮಣಿಪುರಿ ಶಾಲು, ಸೀರೆ, ಬಣ್ಣ-ಬಣ್ಣದ ಮಣಿಮಾಲೆಗಳು ಬಹಳ ಪ್ರಸಿದ್ಧ ವಾಗಿದೆ. ಬಡವರು ಡಾಬಾಗಳನ್ನು ನಡೆಸುತ್ತಾರೆ. ವಿದ್ಯಾವಂತರು ಹೊಟೇಲ್‍ಗಳು ಲಾಡ್ಜ್‍ಗಳು ಮತ್ತು ರೆಸ್ಟೋರೆಂಟ್ ಗಳನ್ನು ನಡೆಸುತ್ತಾರೆ.
ತ್ರಿಪುರದಲ್ಲಿ ಪ್ರವಾಸಿ ತಾಣಗಳಿಗೆ ಕೊರತೆಯೇನಿಲ್ಲ. ಇಲ್ಲಿ ನೋಡಲು ಸುಂದರ ಸ್ಥಳಗಳಿವೆ. ನಗರ ಮಧ್ಯದಲ್ಲಿ ಸುಂದರವಾದ ಉಜ್ಜೇಯಂತ್ ಅರಮನೆ ಇದೆ. ಅನತಿ ದೂರದಲ್ಲಿ ಶಿವ ದೇವಾಲಯವಿದೆ. ಅಗರ್ ತಲಾದಿಂದ ಹಲವಾರು ಮೈಲುಗಳ ದೂರದಲ್ಲಿ ತ್ರಿಪುರ ಸುಂದರಿ ದೇವಾಲಯ, ಜಲ್‍ಮಹಲ್ ಎಂಬ ಅರಮನೆ, ಊನಕೋಟಿ ಎಂಬಲ್ಲಿ ಕಲ್ಲಿನಲ್ಲೇ ರೂಪುಗೊಂಡ ಶಿವಲಿಂಗ ಎಲ್ಲವೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ನಾವು ಉಳಿದುಕೊಂಡ ಹೋಟೇಲಿನ ಮ್ಯಾನೇಜರ್ ನೋಡಬೇಕಾದ ಸ್ಥಳಗಳ ಬಗ್ಗೆ ಒಳ್ಳೆಯ ಮಾಹಿತಿಕೊಟ್ಟರು.
ಮರುದಿನ ಬೆಳಗ್ಗೆ ತ್ರಿಪುರೇಶ್ವರಿಯ ದರ್ಶನ ಮಾಡಲು ಹೊರಟೆವು. ತ್ರಿಪುರೇಶ್ವರಿ ದೇವಾಲಯವು ತ್ರಿಪುರದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಉದಯಪುರ ಎಂಬ ಸ್ಥಳದಲ್ಲಿದೆ. ಇಲ್ಲಿಗೆ ಒಳ್ಳೆಯ ಸಾರಿಗೆ ವ್ಯವಸ್ಥೆ ಇಲ್ಲ. ನಾವು ತ್ರಿಪುರಾದಿಂದ ಹೊಟೇಲ್ ಮ್ಯಾನೇಜರ್ ಸಲಹೆಯಂತೆ ಒಂದು ಟ್ಯಾಕ್ಸಿಯನ್ನು ಗೊತ್ತುಮಾಡಿಕೊಂಡು ಬೆಳಿಗ್ಗೆ 7-30ಕ್ಕೆ ಹೊರಟೆವು. ಸುಮಾರು ಮೂರುಗಂಟೆ ಪ್ರಯಾಣಿಸಿ ತ್ರಿಪುರೇಶ್ವರಿಯ ದೇವಾಲಯವನ್ನು ತಲಪಿದೆವು. ಹಳ್ಳಿಯ ವಾತಾವರಣದಲ್ಲಿರುವ ಸುಂದರ ದೇವಾಲಯವಿದು. ಇದರ ಅಭಿಮುಖವಾಗಿ ರಸ್ತೆಯ ಇನ್ನೊಂದು ಮಗ್ಗುಲಲ್ಲಿ ದೊಡ್ಡ ಕೆರೆ ಇದೆ. ರಸ್ತೆಯ ಇಕ್ಕೆಡೆಗಳಲ್ಲಿ ಪೂಜಾ ಪರಿಕರಗಳನ್ನೂ ಕಲಾತ್ಮಕ ವಸ್ತುಗಳನ್ನು ಮಾರುತ್ತಿರುವ ಅಂಗಡಿ ಸಾಲುಗಳಿವೆ. ವಿಶಾಲವಾದ ಆವರಣವುಳ್ಳ ಈ ದೇವಾಲಯದ ಗರ್ಭಗುಡಿಯು ಪ್ರಾಣಿವಧಾ ಸ್ಥಳಕ್ಕೆ ಅಭಿಮುಖವಾಗಿದೆ. ಸುಂದರ ಮುಖದ ತ್ರಿಪುರೇಶ್ವರಿ ಮೂರ್ತಿಯು ಹೂಗಳಿಂದ ಅಲಂಕರಿಸ್ಪಟ್ಟಿದ್ದು ಮಂದಹಾಸವನ್ನು ಬೀರುವಂತೆ ಕಾಣುತ್ತಿತ್ತು. ಗರ್ಭಗುಡಿಯ ಎರಡು ಬದಿಗಳಲ್ಲಿ ಹಗ್ಗದ ಬ್ಯಾರಿಕೇಡ್‍ಗಳನ್ನು ವಧಾ ಸ್ಥಳದವರೆಗೆ ಹಾಕಲಾಗಿದೆ. ಯಾರೂ ನಡುವೆ ಓಡಾಡುವಂತಿಲ್ಲ. ಈ ವಧಾ ಸ್ಥಳದಲ್ಲಿ ಕುರಿಗಳನ್ನು ಬಲಿಕೊಡುತ್ತಾರೆ. ಈ ಬಲಿ ದೇವಿಗೆ ಅರ್ಪಣೆಯಾಗಿದೆ.
ಭಕ್ತರು ಎಡಬಲಗಳಲ್ಲಿ ಸಾಲಾಗಿ ಭಕ್ತಿ ಭಾವದಿಂದ ನಿಂತಿರುತ್ತಾರೆ. ಕುರಿತಲೆಯನ್ನು ಒಂದೇ ಏಟಿಗೆ ತುಂಡರಿಸುವರು. ಪೂಜಾರಿಗಳು ದೇವಿಯನ್ನು ಸ್ಮರಿಸುತ್ತಾ ನಿರ್ವಿಕಾರಭಾವದಿಂದ ಕುರಿಗಳನ್ನು ವಧಿಸುತ್ತಾರೆ. ಇಲ್ಲಿ ಈ ಪದ್ಧತಿ ಶತಮಾನಗಳಿಂದ ನಡೆದು ಬರುತ್ತಿದೆ. ತ್ರಿಪುರ ಸುಂದರಿ ಶಕ್ತಿ ದೇವತೆ. ಆದರೆ ದೇವಿಯ ಪೂಜೆ, ಹೂವು, ಹಣ್ಣುಕಾಯಿ ಮತ್ತು ಅರಶಿನ, ಕುಂಕುಮಗಳಿಂದ ಮಾತ್ರ ನಡೆಯುವುದು. ಅಲ್ಲಿಯ ಭಕ್ತರ ಪ್ರಕಾರ ಹರಕೆ ಕುರಿಗಳ ಬಿಸಿರಕ್ತ ಆಕೆಯ ಆಹಾರವಂತೆ. ಪ್ರಾಣಿಬಲಿಯನ್ನು ಈಶಾನ್ಯ ರಾಜ್ಯಗಳ ಶಕ್ತಿದೇವತೆಗಳ ದೇವಾಲಯಗಳಲ್ಲೆಲ್ಲಾ ಕಾಣಬಹುದು. ಹಸನ್ಮುಖಿ ದೇವಿಯ ಮೂರ್ತಿಗೆ ಹೂವಿನ ಹಾರವನ್ನು ಅರ್ಪಿಸಿ, ಭಕ್ತಿ ಬಾವದಿಂದ ನಮಿಸಿ ಮನಸ್ಸಿಗೆ ಬೇಜಾರಾದರೂ ಪ್ರಾಣಿವಧೆಯನ್ನು ವೀಕ್ಷಿಸಿ ದೇವಾಲಯದಿಂದ ನಿರ್ಗಮಿಸಿದೆವು. ಮನಸ್ಸೆಲ್ಲವು ಪ್ರಾಣಿವಧೆಯ ಗುಂಗಿನಲ್ಲಿ ಮುಳುಗಿ ಹೋಗಿತ್ತು. (ಮುಂದುವರಿಯುವುದು)
-ಕೊರವಂಡ ರೇವತಿ ತಿಮ್ಮಯ್ಯ,
ಕಡಗದಾಳು.