ಕುಶಾಲನಗರ, ಅ. 17: ಕಾವೇರಿ ತುಲಾ ಸಂಕ್ರಮಣ ಅಂಗವಾಗಿ ಕುಶಾಲನಗರದ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಕಾವೇರಿ ನದಿಗೆ ಮಹಾ ಆರತಿ ಬೆಳಗುವ ಕಾರ್ಯಕ್ರಮ ನಡೆಯಿತು.

ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಾವೇರಿ ನದಿ ತಟದ ಆರತಿ ಕ್ಷೇತ್ರದಲ್ಲಿ ಅರ್ಚಕ ಕೃಷ್ಣಮೂರ್ತಿ ಭಟ್ ಅವರಿಂದ ಬೆಳಗ್ಗೆ ಪೂಜಾ ವಿಧಿ ನೆರವೇರಿತು. ಅಷ್ಟೋತ್ತರ, ಕುಂಕುಮಾರ್ಚನೆ, ಮಹಾಮಂಗಳಾರತಿ ನೆರೆದಿದ್ದ ಭಕ್ತರು ಕಾವೇರಿ ನದಿಗೆ ಮಹಾ ಆರತಿ ಬೆಳಗಿದರು.

ಇದೇ ಸಂದರ್ಭ ನೆರೆದಿದ್ದವರಿಗೆ ಅಚ್ಚರಿಯೊಂದು ಕಂಡುಬಂತು. ಕಾವೇರಿ ತೀರ್ಥೋದ್ಭವ ಲಗ್ನ ಸಮಯದಲ್ಲಿ ಸರಿಯಾಗಿ ನದಿ ನೀರಿನಲ್ಲಿ ಕೆಲವು ಕ್ಷಣಗಳ ಜಲ ಉದ್ಭವವಾದ ದೃಶ್ಯ ಗೋಚರಿಸಿತು. ತೀರ್ಥೋದ್ಭವ ಮಾದರಿಯಲ್ಲಿ ಕಂಡುಬಂದ ದೃಶ್ಯ ಕಂಡು ನೆರೆದಿದ್ದವರು ಆಶ್ಚರ್ಯಗೊಳ್ಳುವುದರೊಂದಿಗೆ ಕಾವೇರಿ ದರ್ಶನದಿಂದ ಪುಳಕಿತರಾದರು.

ಈ ಸಂದರ್ಭ ಮಹಾ ಆರತಿ ಬಳಗದ ಪ್ರಮುಖರಾದ ಎಂ.ಎನ್.ಚಂದ್ರಮೋಹನ್, ವನಿತಾ ಚಂದ್ರಮೋಹನ್, ಡಿ.ಆರ್.ಶಿವಶಂಕರ್, ಕೆ.ಆರ್.ಶಿವಾನಂದನ್, ಬಿ.ಜೆ.ಅಣ್ಣಯ್ಯ ಮತ್ತಿತರರು ಇದ್ದರು.