ಕಣಿವೆ, ಅ. 11: ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಪ್ಪದಕಂಡಿ ನಿವಾಸಿಗಳಿಗೆ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ಯೋಜನೆ ಸಂಕಟದೊಂದಿಗೆ ಸಂಕಷ್ಟವನ್ನು ತಂದಿದೆ. ಕಾವೇರಿ ನದಿ ದಂಡೆಯಂಚಿನಲ್ಲಿ ದಶಕಗಳಿಂದ ಬದುಕು ಕಟ್ಟಿಕೊಂಡಿರುವ ಇವರಿಗೆ ಕಳೆದ ಮೂರು ವರ್ಷಗಳಿಂದ ಸತತವಾಗಿ ಬಂದ ಕಾವೇರಿ ನದಿ ಪ್ರವಾಹ ಈ ಜನರ ಬದುಕನ್ನು ಮೂರಾಬಟ್ಟೆಯಾಗಿಸಿತ್ತು. ಅಂದರೆ ಆ ಸಂಕಟದಿಂದ ಹೊರಬರುವ ಮುನ್ನವೇ ಕೇಂದ್ರ ಸರ್ಕಾರದ ಪ್ರಸ್ತಾವಿತ ರಾಷ್ಟ್ರೀಯ ಹೆದ್ದಾರಿ ಯೋಜನೆ ಈಗ ಈ ವಾಸಿಗಳ ನೆಮ್ಮದಿಯನ್ನು ಕಿತ್ತುಕೊಂಡಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇಲ್ಲಿ ಬಂದು ವಿಸ್ತ್ರತ ರಸ್ತೆಯ ನಿರ್ಮಾಣಕ್ಕೆ ಭೂಮಿಯನ್ನು ಸರ್ವೆ ಮಾಡಿ ಹಾಕಿದ ಅಳತೆ ಗಲ್ಲುಗಳು ಈ ವಾಸಿಗಳ ಎದೆ ಮೇಲೆ ನಿಂತತ್ತಿವೆ. ಕೂಲಿ - ನಾಲಿ ಮಾಡಿಕೊಂಡು ಮಕ್ಕಳು - ಮರಿಗಳನ್ನು ಶಾಲೆಗಳಿಗೆ ಕಳಿಸಿಕೊಂಡು ಅಕ್ಷರ ಕಲಿಸುತ್ತಿರುವ ಇಲ್ಲಿನ ಮಂದಿಗಳು, ಹೆದ್ದಾರಿಗೆ ಆಹುತಿಯಾಗುವ ನಮ್ಮ ಮನೆ - ಮಠಗಳನ್ನು ಕಳೆದುಕೊಂಡು ನಾವು ಇರುವುದಾದರು ಹೇಗೆ ? ಮತ್ತು ಹೋಗುವುದಾದರೂ ಎಲ್ಲಿಗೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ವಾಸಿಗಳಿಗೆ ಕೂಡಲೇ ಸ್ಥಳೀಯ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಆಡಳಿತ ಹೆದ್ದಾರಿಯ ವಾಸ್ತವಿಕತೆ, ಹೆದ್ದಾರಿಯ ಸರಹದ್ದು, ಇದರಿಂದಾಗುವ ಸಾಧಕ - ಬಾಧಕಗಳ ಕುರಿತು ಮಾಹಿತಿ ನೀಡುವ ಜೊತೆಗೆ ಸಂತ್ರಸ್ತರಿಗೆ ಸಾಂತ್ವನ ಹೇಳುವ ತುರ್ತು ಅಗತ್ಯವಿದೆ. ಅಲ್ಲದೆ ದಶಕಗಳಿಂದಲೂ ಬದುಕು ಕರುಣಿಸಿರುವ ಸೂರುಗಳು ಹೆದ್ದಾರಿಗಾಗಿ ನೆಲಸಮ ವಾಗುವುದರಿಂದ ಸಂತ್ರಸ್ತರಿಗೆ ಬದಲೀ ಸ್ಥಳಗಳಲ್ಲಿ ಪರ್ಯಾ ಯವಾಗಿ ನಿವೇಶನವನ್ನು ನೀಡುವ ಮತ್ತು ಸೂರು ನಿರ್ಮಿಸಲು ಅನುಕೂಲವಾಗುವಂತಹ ವ್ಯವಸ್ಥೆ ಕಲ್ಪಿಸಲು ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಮುಂದಾಗಬೇಕಿದೆ. ನದಿಯಂಚಿನಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಕೆಲವರಿಗೆ ಹಕ್ಕುಪತ್ರ ಇರುವುದಿಲ್ಲ. ಕೇವಲ ಪಂಚಾಯತಿಗೆ ಪಾವತಿಸಿರುವ ಕಂದಾಯದ ರಶೀದಿಗಳು ಇರುವುದರಿಂದ ಹೆದ್ದಾರಿ ಪ್ರಾಧಿಕಾರ
(ಮೊದಲ ಪುಟದಿಂದ) ನೀಡುವ ಪರಿಹಾರಕ್ಕೆ ಇಲ್ಲಿನ ನಿವಾಸಿಗಳು ಭಾಜನರಾಗುವರೇ ಎಂಬಿತ್ಯಾದಿ ವಿಚಾರಗಳನ್ನು ಅರಿತು ನೊಂದ ಮಂದಿಗೆ ಸಾಂತ್ವನ ಹೇಳಬೇಕಿದೆ. ನಿಮ್ಮೊಂದಿಗೆ ನಾವಿದ್ದೇವೆ. ಮತ್ತು ಜಿಲ್ಲಾಡಳಿತವಿದೆ ಎಂಬ ಕನಿಷ್ಟ ಆತ್ಮಸ್ಥೈರ್ಯವನ್ನು ತುಂಬಬೇಕಾದ ಅನಿವಾರ್ಯ ತೆಯೂ ಈಗ ಜನರಿಗೆ ಅಗತ್ಯವಿದೆ. ಆ ಕೆಲಸ ಈಗ ಆಗಬೇಕಿದೆ. ಹಾಗೂ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ಸ್ಪರ್ಧಾ ವೀರ - ಶೂರರು ಕೂಡ ಈ ನೊಂದ ಮನಗಳಿಗೆ ಜೊತೆಯಾಗಬೇಕಿದೆ.
- ಮೂರ್ತಿ