ಪೆರಾಜೆ, ಅ. 12: ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆಯು ದೇವಸ್ಥಾನ ಆಡಳಿತ ಮೊಕ್ತೇಸರ ವಿಶ್ವನಾಥ್ ಕುಂಬಳಚೇರಿ ಅವರ ಅಧ್ಯಕ್ಷತೆಯಲ್ಲಿ ದೇವಾಲಯದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಕುರಿತು ಅಧ್ಯಕ್ಷ ವಿಶ್ವನಾಥ್ ಕುಂಬಳಚೇರಿ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಗತ ಮಹಾಸಭೆಯ ವರದಿ, ಆಡಳಿತ ಸಮಿತಿಯ ವರದಿ ಮತ್ತು ಲೆಕ್ಕ ಪತ್ರ ಮಂಡನೆ, ಶ್ರೀ ಕಾವೇರಿ ಸಂಕ್ರಮಣಕ್ಕೆ ತಲಕಾವೇರಿಗೆ ಹೋಗುವ ಬಗ್ಗೆ , ಆಯುಧ ಪೂಜೆ ಆಚರಣೆ ಬಗ್ಗೆ ಮತ್ತು ಇತರ ವಿಷಯ ಬಗ್ಗೆ ಚರ್ಚಿಸಲಾಯಿತು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಾತ್ರಾ ಉತ್ಸವಗಳು ನಡೆಯದ ಕಾರಣ ಪ್ರಸ್ತುತ ಇರುವ ಆಡಳಿತ ಮಂಡಳಿಯನ್ನೇ ಮುಂದುವರೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರುಗಳಾದ ಕೋಡಿ ಬಾಸ್ಕರ, ಕುಂಬಳಚೇರಿ ಗಣಪತಿ, ಮೂಲೆಮಜಲು ವಿಶ್ವನಾಥ್, ನಿಡ್ಯಮಲೆ ಪುರುಷೋತ್ತಮ, ದೇವತಕ್ಕ ರಾಮಕಜೆ ರಾಜಗೋಪಾಲ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಜನಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ದೇವಸ್ಥಾನ ಆಡಳಿತ ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ ಸ್ವಾಗತಿಸಿ, ಸಹ ಕಾರ್ಯದರ್ಶಿ ಜೋಯಪ್ಪ ನಿಡ್ಯಮಲೆ ವಂದಿಸಿದರು.