ಸೋಮವಾರಪೇಟೆ, ಅ.12: ಸಹಕಾರ ಸಂಘಗಳ ಮೂಲಕ ಪಡೆಯುವ ಸಾಲಗಳನ್ನು ಸದುದ್ದೇಶಕ್ಕೆ ಬಳಸಿಕೊಂಡು, ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಮಾತ್ರ ಸಹಕಾರ ಕ್ಷೇತ್ರದ ಉಳಿವು ಸಾಧ್ಯ ಎಂದು ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅಭಿಪ್ರಾಯಿಸಿದರು.

ಇಲ್ಲಿನ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಜಂಟಿ ಬಾಧ್ಯತಾ ಗುಂಪುಗಳಿಗೆ ಸಾಲ ಒದಗಿಸುವ ವಿನೂತನ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊಡಗಿನಲ್ಲಿ 6 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು, ಒಂದೂಕಾಲು ಲಕ್ಷ ಮಾತ್ರ ರೈತ ಕುಟುಂಬಗಳಿವೆ. ಇವುಗಳಲ್ಲಿ ಕೇವಲ 35 ರಿಂದ 40 ಸಾವಿರ ರೈತರು ಮಾತ್ರ ಸರ್ಕಾರದ ವಿವಿಧ ಯೋಜನೆಗಳ ಸಾಲ ಸೌಲಭ್ಯಕ್ಕೆ ಒಳಪಡುತ್ತಿದ್ದು, ಉಳಿದ 85 ಸಾವಿರಕ್ಕೂ ಅಧಿಕ ಕುಟುಂಬಗಳು ಜಾಗದ ದಾಖಲಾತಿ ಸಮಸ್ಯೆಯಿಂದ ಸೌಲಭ್ಯ ವಂಚಿತವಾಗಿವೆ ಎಂದರು.ದಾಖಲಾತಿ ಸಮಸ್ಯೆಯಿಂದ ಶೂನ್ಯ ಬಡ್ಡಿ ದರದ ಸಾಲ, ಶೇ. 3ರ ಬಡ್ಡಿ ದರದ ಸಾಲಗಳನ್ನು ಪಡೆದುಕೊಳ್ಳಲು ಈ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದು, ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್ ನಡೆಸಿ, ರೈತರ ಜಾಗಕ್ಕೆ ಆರ್‍ಟಿಸಿ ನೀಡುವಂತೆ ಮನವಿ ಮಾಡಿದ್ದೇವೆ. ಕೊರೊನಾದಿಂದಾಗಿ ಇದು ಇಂದಿಗೂ ಕಾರ್ಯಗತ ಗೊಂಡಿಲ್ಲ ಎಂದರು.

ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಡಿಸಿಸಿ ಬ್ಯಾಂಕ್‍ನಿಂದ ಅತೀ ಹೆಚ್ಚು ಸಾಲ ನೀಡಲಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ವಸೂಲಾತಿಯಾಗುತ್ತಿಲ್ಲ. ಕೆಲವರು ಮುದ್ರಾ ಯೋಜನೆಯ ಸಾಲ ಮನ್ನಾ ಆಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಮೋದಿ ಅವರು ಸಾಲ ಮನ್ನಾದ ಬದಲಿಗೆ ಸಾಲ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದು, ಮುದ್ರಾ ಯೋಜನೆಯ ಸಾಲ ಯಾವದೇ ಕಾರಣಕ್ಕೂ ಮನ್ನಾ ಆಗುವದಿಲ್ಲ ಎಂದು ಬಾಂಡ್ ಗಣಪತಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ಮಾತನಾಡಿ, ಹೊರ ರಾಜ್ಯ, ಜಿಲ್ಲೆಗಳಿಂದ ಬಂದಿರುವ ಫೈನಾನ್ಸ್ ಕಂಪೆನಿಗಳು ಹೆಚ್ಚಿನ ಬಡ್ಡಿದರಕ್ಕೆ ಸಾಲ ನೀಡುತ್ತಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಸಹಕಾರ ಸಂಘದ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಗುಂಪು ಸಾಲ ನೀಡಲಾಗುತ್ತಿದ್ದು, ಜೀವ ವಿಮಾ ಸೌಲಭ್ಯವನ್ನೂ ಒದಗಿಸಲಾಗಿದೆ ಎಂದರು. ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಘೋಷಣೆಗೆ ಪೂರಕ ವಾಗಿ ಜಂಟಿ ಬಾಧ್ಯತಾ ಗುಂಪು ಸಾಲ ಯೋಜನೆಗೆ ಚಾಲನೆ ನೀಡಲಾಗಿದೆ. ರೈತರು ಹಾಗೂ ಬಡವರಿಗೆ ಆರ್ಥಿಕ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದ್ದು, ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕೆಂದು ಮನವಿ ಮಾಡಿದರು.

ಬ್ಯಾಂಕ್‍ನ ನಿರ್ದೇಶಕ ಬಿ.ಡಿ. ಮಂಜುನಾಥ್ ಮಾತನಾಡಿ, ಸಹಕಾರ ಸಂಘಗಳು ಕೃಷಿಕರು ಮತ್ತು ಬಡವರ ಜೀವನಕ್ಕೆ ಆರ್ಥಿಕ ಶಕ್ತಿ ತುಂಬುತ್ತಿವೆ. ಆದರೆ ಕೆಲವೊಂದು ಸಹಕಾರ ಸಂಘಗಳ ಆಡಳಿತ ಮಂಡಳಿಯ ದೌರ್ಬಲ್ಯ, ವೃತ್ತಿಪರತೆಯ ಕೊರತೆ, ಹಣ ದುರುಪಯೋಗ, ಚುನಾವಣೆ ಸಂದರ್ಭ ರಾಜಕೀಯ ಪಕ್ಷಗಳು ಮಾಡುವ ಸಾಲಮನ್ನಾ ಘೋಷu Éಯೊಂದಿಗೆ ಸಾಲಗಾರರೂ ಸಹ ಸಕಾಲದಲ್ಲಿ ಸಾಲ ಮರುಪಾವತಿ ಮಾಡದ ಹಿನ್ನೆಲೆ ಸಹಕಾರ ಕ್ಷೇತ್ರ ನಿರೀಕ್ಷಿತ ಪ್ರಗತಿ ಸಾಧಿಸುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ. ಈಶ್ವರ್, ನಿರ್ದೇಶಕರುಗಳಾದ ಬಿ.ಎಂ. ಸುರೇಶ್, ಅರೆಯೂರು ಜಯಣ್ಣ, ರೂಪಾ ಸತೀಶ್, ಹುಲ್ಲೂರಿಕೊಪ್ಪ ಚಂದ್ರು, ಬಿ.ಶಿವಪ್ಪ, ಚಂದ್ರಿಕಾ ಕುಮಾರ್, ಪಿ.ಎ. ಅನಿತ, ಮೋಹನ್‍ದಾಸ್, ದೇವರಾಜ್, ದಿವಾನ್, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಅವರುಗಳು ಉಪಸ್ಥಿv Àರಿದ್ದರು. ಸಂಘದಿಂದ ರಚಿಸಲಾದ ವಿವಿಧ ಗುಂಪುಗಳಿಗೆ ಸಾಲ ಯೋಜನೆಯ ಚೆಕ್‍ಗಳನ್ನು ಗುಂಪಿನ ಪ್ರಮುಖರಿಗೆ ಹಸ್ತಾಂತರಿಸಲಾಯಿತು.