*ಕೊಡ್ಲಿಪೇಟೆ, ಅ. 12: ವಿಶ್ವವ್ಯಾಪಿಯಾಗಿ ಹಬ್ಬಿರುವ ಕೊರೊನಾಕ್ಕೆ ಹಲವಷ್ಟು ಮಂದಿ ಬಲಿಯಾಗುತ್ತಿದ್ದು, ಇಂತವರ ಅಂತ್ಯಕ್ರಿಯೆಗೆ ಸ್ವಯಂಸೇವಕರು ಕೈಜೋಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಕುಟುಂಬ ಸದಸ್ಯರೂ ಸಹ ಮೃತದೇಹದ ಹತ್ತಿರ ಸುಳಿಯಲು ಹಿಂದೇಟು ಹಾಕುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಯುವಕರು ಸ್ವಯಂ ಪ್ರೇರಣೆಯಿಂದ ಸಮಾಜದ ಕಾರ್ಯ ಎಂಬಂತೆ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ.
ಯಾವದೇ ಪ್ರತಿಫಲಾಪೇಕ್ಷೆ ಇಲ್ಲದೇ, ತಮ್ಮ ಜೀವದ ಹಂಗನ್ನೂ ತೊರೆದು ಸರ್ಕಾರದ ಮಾರ್ಗಸೂಚಿಯನ್ವಯ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಂಡು ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಅಂತ್ಯ ಸಂಸ್ಕಾರ ಮಾಡಿದ ವ್ಯಕ್ತಿಯನ್ನು ಸಮಾಜ ಹೇಗೆ ನೋಡುತ್ತದೆ ಎಂಬದಕ್ಕೆ ಉದಾಹರಣೆಯಾಗಿ ಕೊಡ್ಲಿಪೇಟೆಯಲ್ಲೊಂದು ಘಟನೆ ನಡೆದಿದೆ.
ಕೊಡ್ಲಿಪೇಟೆ ಮುಖ್ಯರಸ್ತೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗಡಿಯನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದ ದಿನೇಶ್ ಎಂಬವರು ಸೇವಾ ಭಾರತಿಯ ಸ್ವಯಂಸೇವಕರಾಗಿದ್ದು, ಕಳೆದ ತಾ. 9ರಂದು ಮೃತಪಟ್ಟ ಬ್ಯಾಡಗೊಟ್ಟದ ಮಲ್ಲಳ್ಳಿ ಗ್ರಾಮದ ಮಹಿಳೆಯ ಅಂತ್ಯಸಂಸ್ಕಾರದಲ್ಲಿ ಇತರ 6 ಮಂದಿಯೊಂದಿಗೆ ತಾವೂ ಸಹ ಸ್ವಯಂಸೇವಕರಾಗಿ ಭಾಗಿಯಾಗಿದ್ದರು.
ಸರ್ಕಾರದ ಸಕಲ ಮಾರ್ಗಸೂಚಿಯನ್ನು ಚಾಚೂ ತಪ್ಪದೇ ಪಾಲಿಸಿ ಇತರ ಸ್ವಯಂಸೇವಕರೊಂದಿಗೆ ಸೇವಾ ಕಾರ್ಯ ಕೈಗೊಂಡಿದ್ದ ದಿನೇಶ್ ಅವರಿಗೆ ಮಾರನೇ ದಿನ ಅಚ್ಚರಿ ಕಾದಿತ್ತು. ತಾನು ಕಳೆದ ಒಂದೂವರೆ ವರ್ಷದಿಂದ ಬಾಡಿಗೆ ಕಟ್ಟಿಕೊಂಡು ವ್ಯಾಪಾರ ನಡೆಸುತ್ತಿದ್ದ ಅಂಗಡಿಯ ಮಾಲೀಕರು, ದಿಡೀರಾಗಿ ಬಂದು ಅಂಗಡಿ ಖಾಲಿ ಮಾಡುವಂತೆ ಸೂಚಿಸಿದರು.
ಇದರಿಂದ ಆಘಾತಕ್ಕೊಳಗಾದ ದಿನೇಶ್ ಅವರು ಕಾರಣ ಕೇಳಿದಾಗ, ನೀವು ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ್ದೀರಿ. ನೀವು ಇಲ್ಲಿರುವುದು ಬೇಡ. ಅಂಗಡಿ ಖಾಲಿ ಮಾಡಿ ಎಂದು ಒತ್ತಡ ಹೇರಿದ್ದಾರೆ.
ಮಾಲೀಕರಿಗೆ ವಾಸ್ತವಾಂಶವನ್ನು ವಿವರಿಸಿದರೂ ಕೇಳುವ ಗೋಜಿಗೆ ಹೋಗದೇ ಬೇರೊಂದು ಬೀಗವನ್ನು ತಾವೇ ಜಡಿದಿದ್ದಾರೆ. ಆಸ್ಟ್ರೇಲಿಯಾದಲ್ಲಿದ್ದ ಅಂಗಡಿ ಮಾಲೀಕರು ಕಳೆದ ನಾಲ್ಕು ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದರು.
ಕಳೆದ ಒಂದೂವರೆ ವರ್ಷಗಳಿಂದ ‘ಮಾಧವ ಸ್ವದೇಶಿ ವಸ್ತು ಭಂಡಾರ’ದ ಹೆಸರಿನಲ್ಲಿ ಅಂಗಡಿ ತೆರೆದು ಸ್ವದೇಶಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ದಿನೇಶ್ ಅವರು, ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಿದ್ದಕ್ಕೆ ಇದೀಗ ಅಂಗಡಿ ಕಳೆದುಕೊಳ್ಳುವಂತಾಗಿದೆ.
ಸದ್ಯಕ್ಕೆ ಕೊರೊನಾ ವೈರಸ್‍ಗೆ ಯಾವದೇ ಔಷಧಿಯಿಲ್ಲ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕೊರೊನಾದೊಂದಿಗೆ ಬದುಕಬೇಕು ಎಂದು ಸ್ವತಃ ಪ್ರಧಾನಿಗಳೇ ಹೇಳಿದ್ದಾರೆ. ಇದರೊಂದಿಗೆ ಸೋಂಕಿಗೆ ತುತ್ತಾದ ವ್ಯಕ್ತಿಗಳ ಅಂತ್ಯಕ್ರಿಯೆ ನಡೆಸುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಸೇವಾ ಮನೋಭಾವನೆಯಡಿ ಮೃತರ ಅಂತ್ಯ ಸಂಸ್ಕಾರ ನೆರವೇರಿಸಿದಕ್ಕೆ, ಅಂಗಡಿ ಖಾಲಿ ಮಾಡಿಸುವ ಮೂಲಕ ಮಾಲೀಕರು ಮರೆಯಲಾರದ ಉಡುಗೊರೆ ನೀಡಿದ್ದಾರೆ! “ಛೇ ಇಂತಹವರೂ ಇದ್ದಾರಾ?” ಎಂದು ಸ್ಥಳೀಯರು ನೊಂದುಕೊಳ್ಳುತ್ತಿದ್ದಾರೆ. - ವಿಜಯ್ ಹಾನಗಲ್