ಮಡಿಕೇರಿ, ಅ.11: ಇದೇ ತಾ. 8 ರಂದು ಸುಳ್ಯದ ಶಾಂತಿನಗರದಲ್ಲಿ ಬೆಳ್ಳಂಬೆಳಿಗ್ಗೆ ಕಲ್ಲುಗುಂಡಿಯ ಸಂಪತ್‍ಕುಮಾರ್ (36) ಎಂಬಾತನನ್ನು ಗುಂಡು ಹಾರಿಸುವದ ರೊಂದಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಕೊಲೆಗೀಡಾದ ಸಂಪತ್ ಆಪ್ತನಾಗಿದ್ದ ಕಲ್ಲುಗುಂಡಿ ಸಂಪಾಜೆಯ ಮನು ಅಲಿಯಾಸ್ ಮನೋಹರ್ ಈ ಕೃತ್ಯದ ಒಂದನೇ ಆರೋಪಿಯೆಂದು ಮೂಲಗಳು ಖಚಿತಪಡಿಸಿವೆ.ಅಲ್ಲದೆ ಈತನೊಂದಿಗೆ ದುಷ್ಕøತ್ಯದಲ್ಲಿ ಕಲ್ಲುಗುಂಡಿ ಸಂಪಾಜೆಯ ನಿವಾಸಿಗಳಾದ ಬಿಪಿನ್ (27), ಮಧು ಅಲಿಯಾಸ್ ಮನೋಜ್ (35), ಕಾರ್ತಿಕ್ (26) ಹಾಗೂ ಜಾಲ್ಸೂರುವಿನ ಶಿಶಿರ್(32) ಬಂಧಿತ ಆರೋಪಿಗಳಾಗಿದ್ದು, ಪರಸ್ಪರ ದ್ವೇಷ ಸಾಧನೆಯೊಂದಿಗೆ, ಬಾಲಚಂದ್ರ ಕಳಗಿ ಕೊಲೆಯ ಹಿನ್ನೆಲೆಯೂ ಸೇರಿದಂತೆ ಸಂಪತ್ ಹತ್ಯೆ ನಡೆದಿರುವದಾಗಿ ಹೇಳಲಾಗುತ್ತಿದೆ.ತಾ. 8 ರಂದು ಬೆಳಿಗ್ಗೆ 6.30 ರಿಂದ 7.15ರ ಸುಮಾರಿಗೆ ಸುಳ್ಯದಿಂದ ಒಂದು ಕಿ.ಮೀ. ಒಳರಸ್ತೆಯ ಸ್ಟೇಡಿಯಂ ಮಾರ್ಗದ ತಿರುವಿನಲ್ಲಿ ಸಂಪತ್ ಹತ್ಯೆಗೆ ಯತ್ನಿಸಿದ್ದು, ಅಲ್ಲಿನ ಏರು ರಸ್ತೆಯಲ್ಲಿ ಸಂಪತ್ ಕಾರು ಹಿಂದಕ್ಕೆ ಚಾಲಿಸಿ ಇಬ್ರಾಹಿಂ ಎಂಬವರ ಮನೆಯ ಗೇಟ್‍ಗೆ ಡಿಕ್ಕಿಯಾಗಿ ನಿಲುಗಡೆಗೊಂಡಿತ್ತು. ಕಾರಿನಿಂದ ಇಳಿದು ಓಡಿಹೋದ ಸಂಪತ್‍ನನ್ನು ಬೆನ್ನಟ್ಟಿದ ಅರೋಪಿಗಳು ಪದ್ಮನಾಭ ಎಂಬವರ ಮನೆಯೊಳಗೆ ಹತ್ಯೆಗೈದು ಪರಾರಿಯಾಗಿದ್ದರು.
ಈ ವೇಳೆ ಟೊಯಾಟ ಕ್ವಾಲೀಸ್ (ಕೆ.ಎ.19 ಎಂ.ಎಫ್. 0789) ಕಾರಿನಲ್ಲಿ ದುಷ್ಕøತ್ಯ ಬಳಿಕ ಪರಾರಿಯಾಗಿದ್ದ ಆರೋಪಿಗಳು, ಇಂದು ಕಡಬ ತಾಲೂಕಿನ ಮೂಂಗ್ಲಿಪಾದೆ ಎಂಬಲ್ಲಿ ಬೇರೊಂದು ಕಾರಿನಲ್ಲಿ (ಕೆ.ಎ. 12 ಎಂ.ಎ. 4385) ತಲೆಮರೆಸಿಕೊಂಡು ತೆರಳುವ ಸಂದರ್ಭ ಪೊಲೀಸರು ಖಚಿತ ಮಾಹಿತಿ ಮೇರೆಗೆ, ಕಾರ್ಯಾಚರಣೆ ನಡೆಸಿ ವಾಹನ ಸಮೇತ ಐವರನ್ನು ಬಂಧಿಸಿದ್ದಾರೆ.
ಕೋವಿ - ಮಾರಕಾಸ್ತ್ರ ವಶ : ಅಲ್ಲದೆ ಈಗಾಗಲೇ ದುಷ್ಕøತ್ಯಕ್ಕೆ ಬಳಸಲಾಗಿದ್ದ ಇನ್ನೊಂದು ಕಾರು ಸೇರಿದಂತೆ ಮೂರು ಕೋವಿಗಳು, ಒಂದು ಕತ್ತಿ ಮತ್ತು ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ದಾಖಲು : ಕೊಲೆಗೀಡಾಗಿರುವ ಸಂಪತ್ ತಂದೆ ಅಪ್ಪುಕುಂಞ್ಞ ನೀಡಿರುವ ದೂರಿನ ಮೇರೆಗೆ, ಸುಳ್ಯ ಠಾಣೆಯಲ್ಲಿ ಅಪರಾಧ ಪ್ರಕರಣ ಸಂಖ್ಯೆ 74/2020ರಲ್ಲಿ ಪೊಲೀಸ್ ಕಾಯ್ದೆ 448, 324, 302 ಹಾಗೂ 34 ಐಪಿಸಿ ಅಡಿಯಲ್ಲಿ ಪೊಲೀಸ್ ಮೊಕದ್ದಮೆ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದು, ಬಂಧಿತರ ಗುರುತು ಪತ್ತೆ ಕವಾಯತು ಬಾಕಿ ಇರುವದರಿಂದ ಆರೋಪಿತರ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾ. 8 ರಂದು ನಡೆದಿರುವ ಕೊಲೆ ಪ್ರಕರಣದ ವಿಚಾರಣೆಯನ್ನು ದಕ್ಷಿಣಕನ್ನಡ ಎಸ್‍ಪಿ ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನದಲ್ಲಿ, ದ.ಕ. ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸುಳ್ಯ ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿ ನೇತೃತ್ವದಲ್ಲಿ ನಡೆಸುತ್ತಿರುವದಾಗಿ ಗೊತ್ತಾಗಿದೆ.
ಮೂವರ ವಿಚಾರಣೆ : ಸಂಪತ್ ಹತ್ಯೆ ಸಂಬಂಧ ಐವರನ್ನು ಬಂಧಿಸಿರುವ ಪೊಲೀಸರು, ಇತರ ಮೂವರನ್ನು ವಿಚಾರಣೆಗೆ ಒಳಪಡಿಸಿರುವದಾಗಿ ಮತ್ತೊಂದು ಮೂಲದಿಂದ ಗೊತ್ತಾಗಿದೆ. ಆರೋಪಿಗಳು ದುಷ್ಕøತ್ಯಕ್ಕೆ ಬಳಸಿರುವ ಕೋವಿಗಳು ಹಾಗೂ ತಪ್ಪಿಸಿಕೊಳ್ಳಲು ಬದಲಿ ವಾಹನ
(ಮೊದಲ ಪುಟದಿಂದ) ನೀಡಿರುವ ಕಾರಣ ತನಿಖೆ ನಡೆಯುತ್ತಿರುವ ಮಾಹಿತಿ ಲಭಿಸಿದೆ.
ಹೆತ್ತಾಕೆಯ ಅಳಲು: ತಾ. 8 ರಂದು ಬೆಳ್ಳಂಬೆಳಿಗ್ಗೆ ಕೊಲೆಗೀಡಾಗಿ ರುವ ನನ್ನ ಮಗ ಸಂಪತ್, 7ರ ಸಂಜೆಯೇ ಬೆಂಗಳೂರಿಗೆ ಹೊರಟಿದ್ದ, ಕೊನೆಯ ಘಳಿಗೆಯಲ್ಲಿ ವಕೀಲರು ಭೇಟಿ ಸಮಯ ಬದಲಾಯಿಸಿದ್ದರಿಂದ, ಬೆಳಿಗ್ಗೆ 6 ಗಂಟೆಗೆ ಹೋಗುವದಾಗಿ ರಾತ್ರಿ ಶಾಂತಿ ನಗರದಿಂದ ಕರೆ ಮಾಡಿದ್ದ, ಬೆಂಗಳೂರಿನಲ್ಲಿ ಮಗನ ಪರಿಚಯವಿರುವ ವಕೀಲರಿಗಾಗಿ ಜೇನು, ಕಾಳುಮೆಣಸು ಪ್ಯಾಕ್ ಮಾಡಿಸಿ ಇರಿಸಿದ್ದ, ಅಂತೆಯೇ ಮಾಂಸ ಭಕ್ಷ್ಯ, ಕರಿದ ಮೀನು ಇತ್ಯಾದಿ ಸಿದ್ಧಗೊಳಿಸಿ ಆತನಿಗಾಗಿ ಕಾಯುತ್ತಿದೆ; ತಾ. 8 ರ ಬೆಳಿಗ್ಗೆ 7.45ರ ಸುಮಾರಿಗೆ ಮಗನ ಕೊಲೆಯಾದ ವಿಷಯ ತಿಳಿಯಿತು. ಸದಾ ಸಂಪತ್ ಒಡನಾಟದಲ್ಲಿದ್ದು, ದುಷ್ಕøತ್ಯಕ್ಕೆ 2 ದಿನ ಹಿಂದೆ ಕೂಡ ನಮ್ಮ ಮನೆಗೆ ಬಂದಿದ್ದ ಪ್ರಮುಖ ಆರೋಪಿ ಮನು ಅಲಿಯಾಸ್ ಮನೋಹರ್‍ನನ್ನ ಪತಿಯ ಬಳಿ ಖರ್ಚಿಗಾಗಿ ರೂ. 2 ಸಾವಿರ ಪಡೆದುಕೊಂಡಿದ್ದ. ಹೀಗೆಂದು ಸಂಪತ್ ತಾಯಿ ಪಾರ್ವತಿ ಅಪ್ಪುಕುಂಞ್ಞ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.