*ಗೋಣಿಕೊಪ್ಪಲು, ಅ. 12: ತಿತಿಮತಿ ಅರಣ್ಯ ವ್ಯಾಪ್ತಿಯ ಬೊಂಬುಕಾಡು, ದಿಡ್ಡಳ್ಳಿ ಹಾಡಿಗಳಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆನೆಚೌಕೂರು ವಲಯದ ವನ್ಯ ಜೀವಿ ಸಪ್ತಾಹ ನಡೆಯಿತು.

ಮತ್ತಿಗೋಡು ವಲಯ ಅರಣ್ಯಾಧಿಕಾರಿ ವೈ.ಕೆ. ಕಿರಣ್‍ಕುಮಾರ್ ವನ್ಯ ಜೀವಿ ಸಪ್ತಾಹಕ್ಕೆ ಚಾಲನೆ ನೀಡಿ ವನ್ಯ ಜೀವಿಗಳು ಮತ್ತು ಪಕ್ಷಿಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಅಳಿವಿನ ಅಂಚಿನಲ್ಲಿ ರುವ ಜೀವಿಗಳ ಸಂರಕ್ಷಣೆಗಾಗಿ ಈ ಬಾರಿ ವನ್ಯ ಜೀವಿ ಸಪ್ತಾಹದಲ್ಲಿ ಭವಿಷ್ಯಕ್ಕಾಗಿ ರಣಹದ್ದು ಹಾಗೂ ಆನೆ ಕಾರಿಡಾರ್ ರಕ್ಷಿಸಿ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ಮೂಲಕ ಅರಣ್ಯ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಕಾಡುಪ್ರಾಣಿಗಳ ಆಹಾರ ಮತ್ತು ಸಂರಕ್ಷಣೆಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಿದೆ ಎಂದು ಮಾಹಿತಿ ನೀಡಿದರು. ಹೆದ್ದಾರಿಯ ಎರಡು ಬದಿಗಳಲ್ಲಿ ಈ ಸಂದರ್ಭ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ನಾಗರಹೊಳೆ ಹುಲಿ ಸಂರಕ್ಷಿತ ದಳದ ಅಧಿಕಾರಿ ಸೇರಿದಂತೆ ಗ್ರಾಮಸ್ಥರು, ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರು ಹಾಜರಿದ್ದರು.