ಶ್ರೀಮಂಗಲ, ಅ. 10 : ಬೆಟ್ಟಗುಡ್ಡ ಪ್ರದೇಶವಾದ ಕೊಡಗಿನ ಮೂಲಕ ದೊಡ್ಡ ಪ್ರಮಾಣದ ಹೆದ್ದಾರಿ ಅಗತ್ಯವಿಲ್ಲ. ಪ್ರವಾಸೋದ್ಯಮಕ್ಕಾಗಿ ರಸ್ತೆ ವಿಸ್ತಾರ ಮಾಡುವುದು ಸೂಕ್ತ ಅಲ್ಲ. ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಹೇಳಲು ಸಾಧ್ಯವಿಲ್ಲ. ಆದರೆ ಅದನ್ನು ನಿಯಂತ್ರಿಸಬೇಕು ಎಂದು ಕೊಡಗು ವನ್ಯಜೀವಿ ಸಂಘದ ಮಾಜೀ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚು ಹೆಚ್ಚು ಪ್ರವಾಸಿಗರು ಬರುತ್ತಿದ್ದರೆ ಪ್ರವಾಸೋದ್ಯಮ ವಿಸ್ತರಣೆಯಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುತ್ತದೆ. ಇದರಿಂದ ಕೊಡಗಿನಲ್ಲಿ ಈಗಾಗಲೇ ಪ್ರಾಕೃತಿಕ ವಿಕೋಪದಿಂದ ಸಂಕಷ್ಟ ಉಂಟಾಗಿದ್ದು, ಪ್ರವಾಸೋಧ್ಯಮದ ವಿಸ್ತರಣೆಯಿಂದ ಭವಿಷ್ಯದಲ್ಲಿ ಮತ್ತಷ್ಟು ಪ್ರಾಕೃತಿಕ ದುರಂತ, ಭೂ ಕುಸಿತ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ - ಮೈಸೂರು ಹೆದ್ದಾರಿ ಬಗ್ಗೆ ಪ್ರಾಧಿಕಾರದ ಅಧಿಕಾರಿ ಬಿ.ಟಿ. ಶ್ರೀಧರ್ ಅವರು ನೀಡಿರುವ ವಿವರವನ್ನು ಮುತ್ತಣ್ಣ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಮಡಿಕೇರಿ-ಮೈಸೂರು ಹೆದ್ದಾರಿ ಯೋಜನೆಯನ್ನು 3 ಪ್ಯಾಕೇಜ್‍ಗಳಾಗಿ ವಿಂಗಡಿಸಲಾಗಿದೆ. ಮಡಿಕೇರಿಯಿಂದ ಬಸವನಹಳ್ಳಿ (ಕುಶಾಲನಗರ ಬೈಪಾಸ್) 22.7 ಕಿ.ಮೀ., ಬಸವನಹಳ್ಳಿಯಿಂದ ಕಳ್ಳಹಳ್ಳಿ (38.8 ಕಿ.ಮೀ) ಮತ್ತು ಕಳ್ಳಹಳ್ಳಿಯಿಂದ ಅಗ್ರಹಾರ (53.52 ಕಿ.ಮೀ). ಇದಕ್ಕೆ ಕಲ್ಲಿನ ಗುರುತು ಕುಶಾಲನಗರ ಬೈಪಾಸ್‍ವರೆಗೆ ಮಾಡಲಾಗುತ್ತದೆ. ಮಡಿಕೇರಿ ಬೆಟ್ಟಗುಡ್ಡ ಪ್ರದೇಶವಾಗಿರು ವುದರಿಂದ ಈ ಬಗ್ಗೆ ಬೆಟ್ಟ ಹಾಗೂ ಕಣಿವೆ ಪ್ರದೇಶಗಳ ಅಧ್ಯಯನ ಮತ್ತು ನಿಯಂತ್ರಣ ಪ್ರಾಧಿಕಾರದ ನಿಯದ ಪ್ರಕಾರ ಇಲ್ಲಿ ಹೆದ್ದಾರಿ ಯೋಜನೆ ಜಾರಿ ಮಾಡುವ ಮೊದಲು ಅಧ್ಯಯನ ಮಾಡಲಾಗುತ್ತದೆ. ಆದ್ದರಿಂದ ಈ ಯೋಜನೆ ಸರ್ಕಾರದ ಪ್ರಾಮುಖ್ಯತೆಯ ಪಟ್ಟಿಯಲ್ಲಿಲ್ಲ. ಅಲ್ಲದೇ ಈ ಯೋಜನೆ ಜಾರಿಗೆ ತರುವ ಮೊದಲು 2020-2021 ಮತ್ತು 2021-2022ಕ್ಕೆ ಸಾರ್ವಜನಿಕರ ಅಭಿಪ್ರಾಯವನ್ನು ರಾಷ್ಟ್ರೀಯ ಪ್ರಾಧಿಕಾರದ ನಿಯಮದಂತೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ ಎಂದು ಮುತ್ತಣ್ಣ ತಿಳಿಸಿದ್ದಾರೆ.
ಬೆಟ್ಟ ಹಾಗೂ ಕಣಿವೆ ಪ್ರದೇಶ ವಾದ ಕೊಡಗು ಜಿಲ್ಲೆಯ ಮೂಲಕ ಯೋಜನೆ ರೂಪಿಸುವುದಾದರೆ ಬೆಟ್ಟ ಹಾಗೂ ಕಣಿವೆ ಅಧ್ಯಯನ ಮತ್ತು ನಿಯಂತ್ರಣ ಪ್ರಾಧಿಕಾರದ ನಿಯಮದಂತೆ 5.5 ಮೀ. ಅಗಲದ ರಾಷ್ಟ್ರೀಯ ಹೆದ್ದಾರಿ ಆಗಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳುವಂತೆ ಹೆಚ್ಚು ವಿಸ್ತಾರದ ಹೆದ್ದಾರಿ ಆಗಲೂ ಅವಕಾಶವಿಲ್ಲ ಎಂದಿದ್ದಾರೆ.
ಬಸವನಹಳ್ಳಿಯಿಂದ ಮೈಸೂರು ವರೆಗೆ ರಾಷ್ಟ್ರೀಯ ಹೆದ್ದಾರಿಯ ವಿರುದ್ಧ ಈಗಾಗಲೇ ನಿವೃತ್ತ ಜಿಲ್ಲಾಧಿಕಾರಿ ಡಾ. ಚಂದ್ರಶೇಖರ್ ಅವರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಎರಡನೇ ಅರ್ಜಿದಾರನಾಗಿ ತಾನು ಸಹ ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಬಸವನಹಳ್ಳಿಯಿಂದ ಮೈಸೂರುವರೆಗಿನ ರಾಷ್ಟ್ರೀಯ ಹೆದ್ದಾರಿಯು ಪಕ್ಷಿದಾಮ ರಂಗನತಿಟ್ಟು ಮತ್ತು ಉದ್ಯಾನವನ ಅಬ್ಬಿತಿಟ್ಟು ಮೂಲಕ ಹಾದುಹೋಗಲಿದ್ದು, ಇದನ್ನು ಪರಿಗಣಿಸಿ ತಡೆ ಕೋರಿರುವುದಾಗಿ ಹೇಳಿರುವ ಅವರು ಈ ಮೇಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆ ಮಾಡಲು ತಡೆ ಇರುವಾಗ ಹೇಗೆ ಯೋಜನೆ ಜಾರಿಯಾಗುತ್ತದೆ ಎಂದು ಪ್ರಶ್ನಿಸಿದರು.