ಮಡಿಕೇರಿ, ಅ. 10 : ಕೊಡವ ಭಾಷೆ ಸಾಹಿತ್ಯ, ಸಂಸ್ಕೃತಿಯ ಆಧಾರ ಸ್ತಂಭವಾಗಿರುವ ಕಲೆ-ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಕೊಡಗು ಭಾಷಿಕ ಜನಾಂಗದವರ ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೊಡವ ಭಾಷಿಕ ಸಮುದಾಯಗಳ ಕೂಟ ಒತ್ತಾಯಿಸಿದೆ.

ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಹಾಗೂ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪ್ರಮುಖರು, ಕೊಡವ ಭಾಷೆ ಮಾತನಾಡುವ ಹಲವು ಪಂಗಡಗಳಿವೆ ಎಂದು ಗಮನ ಸೆಳೆದಿದ್ದಾರೆ.

ಕೊಡವ ಭಾಷೆ ಮಾತಾನಾಡುವವರು ಅನಾದಿ ಕಾಲದಿಂದಲೂ ಪೂರ್ವಿಕರಿಂದ ನಡೆಸಿಕೊಂಡು ಬಂದಿರುವ ಪದ್ಧತಿ, ಪರಂಪರೆ, ಆಚಾರ, ವಿಚಾರ, ಸಂಪ್ರದಾಯಗಳನ್ನು ಮೈಗೂಡಿಸಿ ಕೊಂಡು ಮುನ್ನಡೆಯುತ್ತಿದ್ದಾರೆ. ಈ ನಾಡಿನ ಕೊಡವ ಭಾಷಾ ಮೂಲ ನಿವಾಸಿಗಳಿಗೆ ಇದು ಹೆಮ್ಮೆಯ ವಿಚಾರ ಎಂದರು.

ಈ ಜನಾಂಗದವರಿಗೆ ಐನ್‍ಮನೆ, ಮುಂದ್ಮನೆ, ತೊಟ್ಟಿಮನೆ, ಕೈಮಡಗಳು ಇಂದಿಗೂ ಹೆಗ್ಗುರುತುಗಳಾಗಿ ಕಂಡುಬರುತ್ತಿವೆ. ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲಿ ಸಂಪ್ರದಾಯದಂತೆ ಕಾವೇರಿ ತುಲಾಸಂಕ್ರಮಣ, ಹುತ್ತರಿ, ಕೈಲ್‍ಮುಹೂರ್ತ, ಆಯುಧ ಪೂಜೆಯಂತಹ ಗುರು-ಕಾರೋಣ ಹಾಗೂ ಇಗ್ಗುತ್ತಪ್ಪ ದೇವರ ಪೂಜೆ ಆಚರಿಸಿಕೊಂಡು ಬರುತ್ತಿರುವುದು ಪ್ರಚಲಿತದಲ್ಲಿದೆ. ಹೀಗಾಗಿ ಕೊಡವ ಭಾಷಿಕ ಜನಾಂಗದ ಬೇಡಿಕೆಗಳಿಗೆ ಸರಕಾರ ಸ್ಪಂದಿಸುವಂತೆ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಸಂದರ್ಭ ಕೊಡಗು ಹೆಗ್ಗಡೆ ಸಮಾಜದ ಪ್ರತಿನಿಧಿ ತೋರೆರ ಮುದ್ದಯ್ಯ, ಕೋಲೆಯ ಸಮಾಜದ ಅಧ್ಯಕ್ಷ ಕೋಲೆಯಂಡ ಗಿರೀಶ್, ಐರಿ ಸಮಾಜದ ನಿರ್ದೇಶಕ ಐರೀರ ಬೋಪಯ್ಯ, ಕಣಿಯ ಸಮಾಜದ ಕಾರ್ಯದರ್ಶಿ ಕಣಿಯರ ಪ್ರಕಾಶ್, ಪಣಿಕ ಸಮಾಜದ ಕಾರ್ಯದರ್ಶಿ ಪೊನ್ನಜ್ಜೀರ ಕಿಶು ಭರತ್, ಬೂಣೆಪಟ್ಟಮ ಸಮಾಜದ ಪ್ರತಿನಿಧಿ ಜೋಕೀರ ಜೀವನ್, ಕೊಯವ ಸಮಾಜ ಕಾರ್ಯದರ್ಶಿ ತೋಕಿರ ಕಾಶಿ ಕಾರ್ಯಪ್ಪ, ಮಲೆಯ ಸಮಾಜದ ಅಧ್ಯಕ್ಷ ಮಲೆಯಡ ರಾಜಾ ಮುತ್ತಪ್ಪ, ಸವಿತಾ ಸಮಾಜದ ಪ್ರತಿನಿಧಿ ವೇದಪ್ಪಂಡ ಕಿರಣ್, ಗೊಲ್ಲ ಸಮಾಜದ ಪ್ರತಿನಿಧಿ ಜಗತ್, ಕೌಶಿಕ್, ಬಣ್ಣ ಸಮಾಜದ ಪ್ರತಿನಿಧಿ ಬೀಕಚಂಡ ಬೆಳ್ಯಪ್ಪ, ಮಡಿವಾಳ ಸಮಾಜದ ಪ್ರತಿನಿಧಿ ಮೇಕಂಡ ಪಾಪು ಲೋಕೇಶ್ ಹಾಜರಿದ್ದರು.