ಸುಂಟಿಕೊಪ್ಪ, ಅ. 10: ಕ್ಷೀಪ್ರಗತಿಯಲ್ಲಿ ಬೆಳೆಯುತ್ತಿರುವ ಮಾದಾಪುರ ಪಟ್ಟಣಕ್ಕೆ ಪೊಲೀಸ್ ಠಾಣೆಯನ್ನು ಮೇಲ್ದಜೇಗೆರಿಸುವ ಅಗತ್ಯತೆ ಇದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸೋಮವಾರಪೇಟೆ - ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಮಧ್ಯಭಾಗದಲ್ಲಿರುವ ಮಾದಾಪುರ ಬೆಳೆಯುತ್ತಿರುವ ಪಟ್ಟಣವಾಗಿದೆ. ಈಗಿರುವ ಪೊಲೀಸ್ ಉಪಠಾಣೆಯಲ್ಲಿ 3 ಹುದ್ದೆಗಳು ಮಾತ್ರ ಹೊಂದಿದೆ. ಎಎಸ್‍ಐ 1,ಮುಖ್ಯಪೇದೆ ಹಾಗೂ ಓರ್ವ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೊಲೀಸ್ ಉಪಠಾಣೆ ವ್ಯಾಪ್ತಿಗೆ 25 ಕಿ.ಮಿ. ದೂರವಿರುವ ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಗರ್ವಾಲೆ, ಮಂಕ್ಯ, ಕುಂಬಾರಗಡಿಗೆ, ಕಿರುದಾಲೆ, ಶಿರಂಗಳ್ಳಿ, ಮೂವತೋಕ್ಲು, ಮಾದಾಪುರ, ಹಟ್ಟಿಹೊಳೆ, ಗರಗಂದೂರು, ಕುಂಬೂರು, ಜಂಬೂರು ಗ್ರಾಮಗಳು ಒಳಪಡುತ್ತವೆ. ಇಷ್ಟೊಂದು ವಿಸ್ತೀರ್ಣ ಹೊಂದಿರುವ ಪ್ರದೇಶದಲ್ಲಿ 3 ಮಂದಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವುದು ಕಷ್ಟಸಾಧ್ಯವಾಗಿದೆ. ನ್ಯಾಯಾಲಯದಿಂದ ಬರುವ ಸಮನ್ಸ್ ನೀಡಲು ಇತರ ಅಪರಾಧ ಘಟನೆಗಳು ನಡೆದಾಗ ಪೊಲೀಸರು ಕುಗ್ರಾಮವನ್ನು ತಲುಪಲು ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಮೋಟಾರ್ ಬೈಕ್‍ನಲ್ಲಿ ಪೊಲೀಸರು ತೆರಳಿದರೂ ದೂರ ದೂರದಲ್ಲಿ ಇರುವ ಮನೆಗಳನ್ನು ಪತ್ತೆ ಹಚ್ಚಲು ದಾರಿಯೂ ಸರಿ ಇರುವುದಿಲ್ಲ ನಡೆದುಕೊಂಡೆ ಹೋಗಿ ಸಮನ್ಸ್ ನೀಡುವ ಕಷ್ಟ ಪರಿಸ್ಥಿತಿ ಪೊಲೀಸರದ್ದಾಗಿದೆ.
ರಸ್ತೆ ಅವಘಡ, ಕಾನೂನು ಸುವ್ಯವಸ್ಥೆ ಕಾಪಾಡುವುದು ಕುಗ್ರಾಮದಲ್ಲಿ ತ್ರಾಸದಾಯಕವಾಗಿದ್ದು, ಭೂಕುಸಿತದಿಂದ ಮನೆ ಮಠ ಕಳಕೊಂಡ ಸಂತ್ರಸ್ತರಿಗೆ ಸರಕಾರ ಈಗಾಗಲೇ ಜಂಬೂರುವಿನಲ್ಲಿ 383 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಇನ್ಪೋಸಿಸ್ ಸಂಸ್ಥೆಯಿಂದಲ್ಲೂ 100 ಮನೆ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಹೊಸ ಮನೆಗಳ ಜನ ಸಂಖ್ಯೆ ಸೇರಿದರೆ 12,000ಕ್ಕೂ ಅಧಿಕ ಜನ ಸಂಖ್ಯೆ ಹೊಂದಿದೆ. ಗರ್ವಾಲೆ ಗ್ರಾಮ ಪಂಚಾಯಿತಿ ವಿಭಾಗ ಕುಗ್ರಾಮವಾಗಿದ್ದು, ಯಾವುದೇ ದೂರು ಪ್ರಕರಣಕ್ಕೆ ಸ್ಥಳಕ್ಕೆ ತೆರಳಿ ಹಿಂತಿರುಗಲು 1 ದಿನ ವ್ಯರ್ಥವಾಗಲಿದೆ. ರಸ್ತೆ ಅವಘಡ ಸಂಭವಿಸಿ ಮೃತಪಟ್ಟರೆ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರ ‘ಡಿ’ಗ್ರೂಫ್ ನೌಕರರ ಕೊರತೆಯಿಂದ ಸೋಮವಾರಪೇಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಥವಾ ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಬೇಕಾದ ಅರ್ನಿವಾರ್ಯತೆ ಇದೆ. ಸರಕಾರ ಮಾದಾಪುರ ಪೊಲೀಸ್ ಉಪಠಾಣೆಯನ್ನು ಮೇಲ್ದರ್ಜೆಗೆ ಏರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಜನರಿಗೆ ಒಳಿತಾಗಲಿದೆ. ಈ ನಿಟ್ಟಿನಲ್ಲಿ ಶಾಸಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
- ರಾಜು ರೈ