ವೀರಾಜಪೇಟೆ, ಅ. 10: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಖಿಲ ಕೊಡವ ಸಮಾಜದ ಯುವ ಘಟಕ ಅಧ್ಯಕ್ಷರಾಗಿ ಚಮ್ಮಟೀರ ಪ್ರವೀಣ್ ಉತ್ತಪ್ಪ ಆಯ್ಕೆಯಾಗಿದ್ದಾರೆ.

ವೀರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಪ್ರವೀಣ್ ಉತ್ತಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷ ಮಾತಂಡ ಮೊಣ್ಣಪ್ಪ ಸಭೆಗೆ ಮಾಹಿತಿ ನೀಡಿದರು.

ಯುವ ಜನಾಂಗವನ್ನು ಕೊಡವಾಮೆಯಡಿಯಲ್ಲಿ ತಯಾರು ಮಾಡುವ ಜವಬ್ದಾರಿಯನ್ನು ಯುವ ಘಟಕಕ್ಕೆ ನೀಡಿದ್ದು, ಇದರಿಂದ ಕೊಡವ ಸಂಸ್ಕøತಿಯತ್ತ ಕೊಡವ ಯುವ ಜನಾಂಗ ಆಕರ್ಷಣೆಗೊಳ್ಳಲಿದ್ದಾರೆ. ಯುವ ಜನಾಂಗ ಈ ದೇಶದ ಆಸ್ತಿಯಾಗಿದ್ದು, ಇವರ ಕೈಯಲ್ಲಿ ಅಧಿಕಾರವನ್ನು ನೀಡಿದರೆ ಬದಲಾವಣೆ ಗಾಳಿ ಬೀಸಲಿದೆ ಎಂಬ ಆಲೋಚನೆಯಲ್ಲಿ ಈ ಯುವ ಘಟಕಕ್ಕೆ ಕಳೆದ ಆರು ತಿಂಗಳ ಹಿಂದೆಯೇ ಚಾಲನೆ ನೀಡಬೇಕಾಗಿತ್ತು, ಆದರೆ ಕೊರೊನಾ ಮಹಾಮಾರಿಯಿಂದ ಇಷ್ಟು ಸಮಯ ತಡವಾಯಿತು. ಇದೀಗ ಕೊರೊನಾ ದೊಂದಿಗೆ ನಾವು ಬದುಕು ಸಾಗಿಸ ಬೇಕಾಗಿರುವುದು ಅನಿವಾರ್ಯ ವಾಗಿದೆ ಎಂದರು.

ಅಖಿಲ ಕೊಡವ ಸಮಾಜ ಯುವ ಘಟಕದ ವಿಷಯದಲ್ಲಿ ಅಖಿಲ ಕೊಡವ ಸಮಾಜ ಮೂಗು ತೂರಿಸುವುದಿಲ್ಲ, ಆದರೆ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯ ಬೇಕಿದೆ ಕೊಡವ ಸಮುದಾಯದ ಯುವ ಜನಾಂಗದ ಒಳಿತಿಗೆ ಶ್ರಮಿಸಬೇಕಿದೆ ಎಂದರು.

ಯುವ ಘಟಕದ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಜಿಲ್ಲೆಯಲ್ಲಿ ಎಲ್ಲಾ ಜಾತಿ ಹಾಗೂ ವಿವಿಧ ಧರ್ಮದ ಜನಾಂಗವಿದ್ದು, ಅವರೊಂದಿಗೆ ಸಹಬಾಳ್ವೆ ನಡೆಸಲು ನಮ್ಮ ಯುವಜ ನಾಂಗಕ್ಕೆ ಕರೆ ನೀಡಲಾಗುತ್ತದೆ, ಎಲ್ಲಾ ಜನಾಂಗದವರೊಂದಿಗೆ ಆನ್ಯೋನ್ಯವಾಗಿ ಜೀವನ ನಡೆಸಲು ಸಂದೇಶ ನೀಡಲಾಗುತ್ತದೆ. ಅದರಲ್ಲೂ ಕೊಡವ ಭಾಷಿಕ ಜನಾಂಗವನ್ನು ಜೊತೆ ಜೊತೆಯಲ್ಲಿ ಕರೆದೊಯ್ಯುವ ಕೆಲಸ ಮಾಡಲಾಗುತ್ತದೆ ಎಂದರು.

ಯುವ ಘಟಕದ ಉಪಾಧ್ಯಕ್ಷರಾಗಿ ಅಣ್ಣೀರ ಹರೀಶ್ ಮಾದಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಸಣ್ಣುವಂಡ ದರ್ಶನ್ ಕಾವೇರಪ್ಪ, ಸಹ ಕಾರ್ಯದರ್ಶಿಯಾಗಿ ಅಪ್ಪಂಡೇರಂಡ ದೇವಯ್ಯ ಹಾಗೂ ಖಜಾಂಚಿಯಾಗಿ ಚಿರಿಯಪಂಡ ವಿಶು ಕಾಳಪ್ಪ ಆಯ್ಕೆಯಾದರೆ, ಸಲಹೆಗಾರರಾಗಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಅವರನ್ನು ಆಯ್ಕೆ ಮಾಡಲಾಗಿದ್ದು, ಇತರ ಸಲಹೆಗಾರರು ಹಾಗೂ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ರಚಿಸಿ ಸದ್ಯದಲ್ಲಿ ಯುವ ಘಟಕಕ್ಕೆ ಸದಸ್ಯತ್ವ ಆಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.