ವೀರಾಜಪೇಟೆ, ಅ. 8 : ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸವೇ ಇದು, ಅಥವಾ ಎರಡು ಜನಾಂಗದ ನಡುವೆ ಕಂದಕ ಸೃಷ್ಠಿಸುತ್ತಿರುವವರು ಯಾರು. ಇದರ ಬಗ್ಗೆ ಭಾಗಮಂಡಲ ನಾಗರಿಕ ವೇದಿಕೆ ಹೆಸರಿನಡಿಯಲ್ಲಿ ಸುದ್ದಿಗೋಷ್ಠಿ ಮಾಡಿ ಗೊಂದಲ ಸೃಷ್ಟಿಸಿದ ಅರೆ ಭಾಷಿಕ ಗೌಡ ಜನಾಂಗದ ಮುಖಂಡರು ಮಾಹಿತಿ ನೀಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಆಗ್ರಹಿಸಿದ್ದಾರೆ.
ಬುಧವಾರ ವೀರಾಪೇಟೆಯ ಅಖಿಲ ಕೊಡವ ಸಮಾಜದಲ್ಲಿ ಕರೆಯಲಾದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ಭಾಗಮಂಡಲ ಗೌಡ ಸಮಾಜದ ನಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ, ಇವರು ಕೊಡವರ ಕುಪ್ಯ ಚೇಲೆಯ ಬಗ್ಗೆ ಹೇಳಿಕೆ ನೀಡಿಲ್ಲ ಎಂದಾದ ಮೇಲೆ ಇಷ್ಟು ದಿವಸ ಕಾಯುವ ಅಗತ್ಯತೆ ಇರಲಿಲ್ಲ, ಮರುದಿನವೇ ಪತ್ರಿಕಾ ಹೇಳಿಕೆಯನ್ನು ನೀಡಿ ನಾವು ಈ ರೀತಿ ಹೇಳಿಲ್ಲ ಪತ್ರಿಕೆಯವರು ನಮ್ಮ ಮಾತನ್ನು ತಿರುಚಿದ್ದಾರೆ ಎಂಬ ಹೇಳಿಕೆಯನ್ನು ನೀಡಬಹುದಿತ್ತು. ಅಥವಾ ಈ ಹೇಳಿಕೆಯನ್ನು ಖಂಡಿಸುವ ಕೆಲಸ ಮಾಡಬೇಕಿತ್ತು, ಆದರೆ ಇದ್ಯಾವುದನ್ನು ಮಾಡದೆ ಇದೀಗ 20 ದಿವಸ ಕಳೆದಮೇಲೆ ಅದರಲ್ಲೂ ಅಖಿಲ ಕೊಡವ ಸಮಾಜ, ಕೊಡವ ಸಮಾಜ ಒಕ್ಕೂಟ ಸೇರಿದಂತೆ ಎಲ್ಲಾ ಕೊಡವ ಸಮಾಜಗಳು ಹಾಗೂ ಜಿಲ್ಲೆಯ ಪ್ರಜ್ಞಾವಂತ ಅರೆಭಾಷೆ ಜನಾಂಗ ಇವರ ವಿರುದ್ಧ ತಿರುಗಿ ಬೀಳುತ್ತಿದ್ದಂತೆ ತರಾತುರಿಯಲ್ಲಿ ನಾವು ಆ ರೀತಿ ಹೇಳಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದು, ಏಕೆ ಎಂದು ಪ್ರಶ್ನಿಸಿದ್ದಾರೆ.
ಕೊಡವರಿಗೆ ಯಾವ ರಾಜನೂ ಕುಪ್ಯ ಚೇಲೆ ಹಾಕಲು ಕಲಿಸಿಲ್ಲ ಹಾಗೂ ಅರಮನೆಯಲ್ಲಿ ಕುಣಿಯಲು ಹೇಳಿಲ್ಲ, ರಾಜನನ್ನು ಸಿಂಹಾಸನದಲ್ಲಿ ಕೂರಿಸಿದ್ದೆ ಕೊಡವರು. ಈ ರಾಜ ಮನೆತನಕ್ಕೆ ಮೊದಲೇ ಕೊಡವರು ಪ್ರತಿನಿತ್ಯ ದೈನಂದಿನ ಚಟುವಟಿಕೆಯಲ್ಲಿ ಕುಪ್ಯ ಚೇಲೆಯಲ್ಲಿಯೇ ಇರುತ್ತಿದ್ದರು ಎನ್ನುವುದಕ್ಕೆ ಹಲವಾರು ದಾಖಲೆಗಳಿವೆ. ಆದರೆ ಇದೀಗ ಆ ಕುಪ್ಯ ಚೇಲೆಯ ಬಟ್ಟೆಯ ಗುಣಮಟ್ಟ ಬದಲಾಗಿದೆ ಹೊರತು ವಿನ್ಯಾಸ ಹಾಗೂ ಮಹತ್ವ ಎಂದಿಗೂ ಬದಲಾಗಿಲ್ಲ ಹಾಗೂ ಬದಲಾಗುವುದು ಇಲ್ಲ ಎಂದು ಅವರು ವಿವರಿಸಿದರು.
ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ನಂದೇಟೀರ ರಾಜ ಮಾದಪ್ಪ, ಅಪ್ಪುಮಣಿಯಂಡ ತುಳಸಿ ಕಾಳಪ್ಪ, ಮಂಡೇಪಂಡ ಸುಗುಣ ಮುತ್ತಣ್ಣ, ವಾಂಚೀರ ನಾಣಯ್ಯ, ಮೂವೇರ ರೇಖಾ ಪ್ರಕಾಶ್, ಅಪ್ಪನೆರವಂಡ ಜೋಯಪ್ಪ, ಐನಂಡ ಪ್ರಕಾಶ್ ಗಣಪತಿ, ಚೇಂದಂಡ ವಸಂತ್, ಕೊಣಿಯಂಡ ಬೋಜಮ್ಮ ಉತ್ತಪ್ಪ, ಪರದಂಡ ವಿಠಲ್ ಭೀಮಯ್ಯ, ಕೋಲತಂಡ ಸುಬ್ರಮಣಿ, ಕಾಳಿಮಾಡ ಮೋಟಯ್ಯ ಕಾರೇರ ವಾಸು ಜೋಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.