ಶ್ರೀಮಂಗಲ, ಅ. 8: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುಮಟೂರು ಗ್ರಾಮದಲ್ಲಿ ಹುಲಿ ದಾಳಿ ನಡೆಸಿ ಗಬ್ಬದ ಹಸುವನ್ನು ಕೊಂದು ಹಾಕಿದೆ.

ಬುಧವಾರ ಮುಸ್ಸಂಜೆ ಈ ಘಟನೆ ನಡೆದಿದ್ದು, ಗ್ರಾಮದ ರೈತ ಬೊಜ್ಜಂಗಡ ದೇವಯ್ಯ ಅವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಬುಧವಾರ ರಾತ್ರಿ ಸ್ಥಳಕ್ಕೆ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಪ್ರಮುಖರಾದ ಮಚ್ಚಮಾಡ ರಂಜಿ, ಪೆಮ್ಮಣಮಾಡ ನಿತಿನ್, ಚಂಗುಲಂಡ ರಾಜಪ್ಪ, ಬಾದುಮಂಡ ಮಹೇಶ್ ಮತ್ತಿತರು ಆಗಮಿಸಿ ಹಸುವನ್ನು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಇದಲ್ಲದೇ ಸ್ಥಳಕ್ಕೆ ಬಿಜೆಪಿ ಕೃಷಿ ಮೋರ್ಚದ ಕಟ್ಟೇರ ಈಶ್ವರ ಆಗಮಿಸಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿದರು. ಸ್ಥಳಕ್ಕೆ ತಿತಿಮತಿ ಎ.ಸಿ.ಎಫ್. ಪಿ.ಪಿ. ಉತ್ತಪ್ಪ, ಶ್ರೀಮಂಗಲ ಆರ್.ಎಫ್.ಓ ವಿರೇಂದ್ರ ಮರಿಬಸಣ್ಣ್‍ನವರ್, ಪೆÇನ್ನಂಪೇಟೆ ಆರ್.ಎಫ್.ಓ ರಾಜಪ್ಪ ಆಗಮಿಸಿ ಪರಿಶೀಲಿಸಿದರು.

ಸ್ಥಳದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಬೊಜ್ಜಂಗಡ ಶೈಲಾ ಸುಬ್ರಮಣಿ, ಮಾಜಿ ಉಪಾಧ್ಯಕ್ಷ ಕಳ್ಳಂಗಡ ರಜತ್ ಪೂವಣ್ಣ, ಗ್ರಾಮದ ಪ್ರಮುಖರಾದ ರಾಜಪ್ಪ, ದಿಲ್ಲು, ಚಂಗಪ್ಪ, ನಿತಿನ್, ಕೃಷ್ಣ, ಬಿ.ಸಿ. ಸುಬ್ರಮಣಿ, ಚಂದನ್, ಕಟ್ಟೇರ ಕರಣ್, ಶರಿನ್, ಮಚ್ಚಮಾಡ ಪ್ರಭು ಅವರು ಜಮಾಯಿಸಿ ಅರಣ್ಯ ಅಧಿಕಾರಿಗಳ ಎದುರು ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿದರು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ 20 ಸಾವಿರ ರೂಪಾಯಿ ಚೆಕ್ಕನ್ನು ಸ್ಥಳದಲ್ಲೇ ನೀಡಲಾಯಿತು. ಇದರೊಂದಿಗೆ ಹೆಚ್ಚುವರಿ 10 ಸಾವಿರ ರೂ. ಪರಿಹಾರದ ಮೊತ್ತವನ್ನು ಶೀಘ್ರದಲ್ಲೇ ನೀಡುವ ಭರವಸೆ ನೀಡಿದರು. ಕೊಡಗು ವನ್ಯ ಜೀವಿ ಸಂಘದಿಂದ ರೂ. 5 ಸಾವಿರ ಪರಿಹಾರವನ್ನು ಈ ಸಂದರ್ಭ ನೀಡಲಾಯಿತು.

ಶ್ರೀಮಂಗಲ ಪಶು ವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಹಸುವಿನ ಮರೋಣೋತ್ತರ ಪರೀಕ್ಷೆ ಮಾಡಿದರು.