ಸೋಮವಾರಪೇಟೆ, ಅ.9: ತಾಲೂಕಿನ ಯಡವನಾಡು-ಕಾರೇಕೊಪ್ಪ ಭಾಗದಿಂದ ಗೋವುಗಳನ್ನು ಅಕ್ರಮವಾಗಿ ತುಂಬಿಸಿಕೊಂಡು ಹೋಗುತ್ತಿದ್ದ ಪಿಕ್‍ಅಪ್‍ನ್ನು ಹಿಂಬಾಲಿಸಿದ ಸಂದರ್ಭ, ಚಲಿಸುತ್ತಿದ್ದ ವಾಹನದಿಂದಲೇ ಗೋವುಗಳನ್ನು ರಸ್ತೆಗೆ ಎಸೆದ ಅಮಾನವೀಯ ಕೃತ್ಯ ನಿನ್ನೆ ನಡುರಾತ್ರಿ ನಡೆದಿದೆ.ನಿನ್ನೆ ತಡರಾತ್ರಿ 2.30ರ ಸುಮಾರಿಗೆ ಕಾರೇಕೊಪ್ಪ ಭಾಗದಿಂದ 6 ಗೋವುಗಳನ್ನು ಪಿಕ್ ಅಪ್ ವಾಹನದಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಯುವಕರು, ಮತ್ತೊಂದು ವಾಹನದಲ್ಲಿ ಪಿಕ್‍ಅಪ್‍ನ್ನು ಬೆನ್ನಟ್ಟಿದ್ದಾರೆ.ಗೋವುಗಳನ್ನು ತುಂಬಿಸಿಕೊಂಡಿದ್ದ ಪಿಕ್‍ಅಪ್ ಅತಿ ವೇಗದಿಂದ ಕುಶಾಲನಗರ ಕಡೆಗೆ ಚಲಿಸುತ್ತಿದ್ದುದರಿಂದ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅದರಂತೆ ಪೊಲೀಸರು ರಸ್ತೆಯ ಮಧ್ಯೆ ಬ್ಯಾರಿಕೇಡ್‍ಗಳನ್ನು ಅಡ್ಡ ಇಟ್ಟು ವಾಹನಕ್ಕೆ ತಡೆಯೊಡ್ಡಲು ಯತ್ನಿಸಿದ್ದಾರೆ.ಈ ನಡುವೆ ಪಿಕ್‍ಅಪ್ ಚಲಿಸುತ್ತಿದ್ದಂತೆಯೇ ಒಳಗಿದ್ದ ಗೋವುಗಳನ್ನು ರಸ್ತೆಗೆ ಎಸೆದು ಅಮಾನವೀಯತೆ ಮೆರೆದಿದ್ದು, ಕೆಲವು ಗೋವುಗಳು ಗಾಯಗೊಂಡಿವೆ. ಕುಶಾಲನಗರದ ಕಡೆ ತೆರಳುತ್ತಿದ್ದಂತೆ

(ಮೊದಲ ಪುಟದಿಂದ) ಕೂಡಿಗೆ ಬಳಿ ಪೊಲೀಸರು ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಬ್ಯಾರಿಕೇಡ್‍ಗೆ ಡಿಕ್ಕಿಹೊಡೆಸಿ ಪಿಕ್‍ಅಪ್ ಮುಂದೆ ಸಾಗಿದೆ.

ತಕ್ಷಣ ಸ್ಥಳದಲ್ಲಿದ್ದ ಹೈವೇ ಪಟ್ರೋಲ್ ವಾಹನದ ಪೊಲೀಸರು ಪಿಕ್‍ಅಪ್‍ನ್ನು ಚೇಸ್ ಮಾಡಿಕೊಂಡು ಮುನ್ನುಗ್ಗಿದ್ದಾರೆ. ಈ ಸಂದರ್ಭ ಪಿಕ್‍ಅಪ್ ಹಿಂಬದಿಯಿದ್ದ ಗೋ ಕಳ್ಳನೋರ್ವ ಪೊಲೀಸರ ವಾಹನದ ಗಾಜಿಗೆ ಸಗಣಿ ಎರಚಿದ್ದಾನೆ. ಇದರಿಂದಾಗಿ ಹೈವೇ ಪಟ್ರೋಲ್ ಮುಂದೆ ಸಾಗಲಾಗದೇ ಹಿಂದೆ ಉಳಿದಿದೆ.

ಈ ಸಂದರ್ಭ ವಾಪಸ್ ಆಗಮಿಸಿದ ಪಿಕ್‍ಅಪ್ ಕಣಿವೆ ರಸ್ತೆಗೆ ನುಗ್ಗಿದ್ದು, ಅಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‍ಗಳನ್ನು ಗುದ್ದಿ ಮುಂದೆ ಸಾಗಿದೆ. ಪಿಕ್‍ಅಪ್‍ನಲ್ಲಿ 5 ಮಂದಿಯಿದ್ದು, ಯಾರೊಬ್ಬರೂ ಸಿಕ್ಕಿಹಾಕಿಕೊಂಡಿಲ್ಲ. ಇದರೊಂದಿಗೆ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವದು ಕಂಡುಬಂದಿದ್ದು, ಆಟೋವೊಂದರ ನಂಬರ್‍ನ್ನು ಪಿಕ್‍ಅಪ್‍ಗೆ ಅಳವಡಿಸಿ ಕೃತ್ಯ ಎಸಗಿರುವದು ಖಾತ್ರಿಯಾಗಿದೆ. ಗೋವುಗಳು ಕಳುವಾಗಿರುವ ಬಗ್ಗೆ ಕಾರೇಕೊಪ್ಪ ಗ್ರಾಮದ ನಿವಾಸಿಗಳಾದ ಮನೋಜ್, ದಿನೇಶ್, ಶರತ್ ಅವರುಗಳು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.