ಮಡಿಕೇರಿ, ಅ. 9: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಮುಂಭಾಗದಿಂದ ಸಾಯಿ ಹಾಕಿ ಮೈದಾನದವರೆಗಿನ 145.25 ಲಕ್ಷ ವೆಚ್ಚದಲ್ಲಿ 500 ಮೀಟರ್ ಉದ್ದ; 7.5 ಮೀಟರ್ ಅಗಲದ ಕಾಂಕ್ರಿಟ್ ರಸ್ತೆ ಹಾಗೂ ಎಸ್.ಪಿ. ಬಂಗಲೆ ಮುಂಭಾಗದಲ್ಲಿ ರಾಡ್ರಿಗಸ್ ಕಟ್ಟಡದವರೆಗೆ 172.90 ಲಕ್ಷ ವೆಚ್ಚದಲ್ಲಿ 225 ಮೀಟರ್ ಉದ್ದ; ಸುಮಾರು 6 ಮೀಟರ್ ಎತ್ತರದ ತಡೆಗೋಡೆ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಹಾಗೂ ಶಾಸಕಿ ವೀಣಾ ಅಚ್ಚಯ್ಯ ಭೂಮಿ ಪೂಜೆ ನೆರವೇರಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂಜನ್ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಇನ್ನೂ ಒಂದು ವಾರಗಳ ಕಾಲ ಕೊರೊನಾ ಪ್ರಮಾಣದ ಬಗ್ಗೆ ಗಮನ ಹರಿಸಲಾಗುವುದು. ಒಂದು ವೇಳೆ ಕೊರೊನಾ ನಿಯಂತ್ರಣಕ್ಕೆ ಬಾರದಿದ್ದಲ್ಲಿ ತಲಕಾವೇರಿ ಜಾತ್ರೆ ಹಾಗೂ ದಸರಾ ಉತ್ಸವಗಳಿಗೆ ಬರುವ ಪ್ರವಾಸಿಗರು 72 ಗಂಟೆ ಮುಂಚಿತವಾಗಿ ಮಾಡಿಸಿದ ಕೊರೊನಾ ಪರೀಕ್ಷಾ ವರದಿ ಯೊಂದಿಗೆ ಬರುವಂತೆಯೂ ಹಾಗೂ ಹೋಂ ಸ್ಟೇಗಳಲ್ಲಿ ತಂಗುವ ವೇಳೆ ಕೊರೊನಾ ಪರೀಕ್ಷಾ ವರದಿ ಇದ್ದರೆ ಮಾತ್ರ ತಂಗಲು ಅವಕಾಶ ನೀಡುವಂತೆ ಹೋಂ ಸ್ಟೇ ಮಾಲೀಕರಿಗೆ ನಿರ್ದೇಶನ ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ರಂಜನ್ ಹೇಳಿದರು. ಮಾತ್ರವಲ್ಲದೆ ಹೋಂ ಸ್ಟೇಗಳಲ್ಲಿನ ಸಿಬ್ಬಂದಿ ಸೇರಿದಂತೆ ಪ್ರವಾಸಿಗರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸುವುದರೊಂದಿಗೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಎಲ್ಲ ಕ್ರಮಗಳ ಬಗ್ಗೆ ಅಂತಿಮವಾಗಿ ಚರ್ಚಿಸಿ ಮೂರು ದಿನಗಳಲ್ಲಿ ಆದೇಶ ಹೊರಡಿಸುವ ಕೆಲಸ ಮಾಡಲಾಗುವು ದೆಂದರು.

ಶಾಲೆ ಪ್ರಾರಂಭದ ಕುರಿತು ಪ್ರತಿಕ್ರಿಯಿಸಿದ ರಂಜನ್ ಮಕ್ಕಳಿಗೆ ಶಿಕ್ಷಣ ಅಗತ್ಯ; ಆದರೆ ಎಲ್ಲಕ್ಕಿಂತಳು ಜೀವ ಬಹುಮುಖ್ಯ. ಆದ್ದರಿಂದ ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದು ಬೇಡ. ಪೋಷಕರು ಕೂಡ ಮಕ್ಕಳ ಬಗ್ಗೆ ಆತಂಕದಲ್ಲಿದ್ದು, ಈ ಹಿನ್ನೆಲೆ ಯಲ್ಲಿ ಶಾಲೆಗಳನ್ನು ಸದ್ಯದ ಮಟ್ಟಿಗೆ ಪ್ರಾರಂಭ

(ಮೊದಲ ಪುಟದಿಂದ) ಮಾಡದಂತೆ ತಾನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಲ್ಲಿ ಮನವಿ ಮಾಡುವುದಾಗಿ ಹೇಳಿದರು. ನಗರದ ಹಿಂದೂ ರುದ್ರಭೂಮಿಯನ್ನು ಪರಿಶೀಲಿಸಿದ್ದು ಸ್ಥಳದಲ್ಲಿ ಸೌದೆ ವ್ಯವಸ್ಥೆ ಮಾಡಲಾಗಿದೆ. ಹೆಣ ಸುಡುವ ಸ್ಥಳದಲ್ಲಿ ಶೆಡ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವು ದೆಂದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಉತ್ತಮ ದರ್ಜೆಯ ರಸ್ತೆ ನಿರ್ಮಿಸ ಬೇಕು. ಜೊತೆಗೆ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಂಡು ರಸ್ತೆ ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು ಎಂದರು.

ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ, ನಗರಸಭಾ ಆಯುಕ್ತ ರಾಮದಾಸ್, ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಕುಮಾರ್, ಜಿಲ್ಲಾಧಿಕಾರಿ ಕಚೇರಿಯ ಕಾರ್ಯಪಾಲಕ ಅಭಿಯಂತರ ಶಿವಾನಂದ, ನಗರಸಭಾ ಮಾಜಿ ಸದಸ್ಯರುಗಳಾದ ಅನಿತಾ ಪೂವಯ್ಯ, ಪ್ರಕಾಶ್ ಆಚಾರ್ಯ, ಪಿ.ಡಿ. ಪೊನ್ನಪ್ಪ, ಸವಿತಾ ರಾಕೇಶ್ ಮತ್ತಿತರರು ಇದ್ದರು.