ಕಣಿವೆ, ಅ. 7: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ನಗರ ಕುಶಾಲನಗರಕ್ಕೆ ಹಳದಿ ಮಿಶ್ರಿತ ಸ್ವರ್ಣ ಬಣ್ಣದ ಹಾರದ ಹೆಲಿಕಾಪ್ಟರ್ ಒಂದು ಬಂದಿದೆ...! ಕುಶಾಲನಗರದ ರಥಬೀದಿಯ ಚೌಡೇಶ್ವರಿ ದೇವಾಲಯದ ಬಳಿಯ ಡಿ.ಟಿ.ನಾಗೇಂದ್ರ ಸಹೋದರರ ಮನೆಯೊಂದರ ಮೇಲೆ ಈ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಗಿದೆ....! ನಗರದ ಸಂತೆಯ ದಿನವಾದ ಮಂಗಳವಾರ ಬಂದ ಈ ಹೆಲಿಕಾಪ್ಟರ್ ನೋಡಲು ಕುಶಾಲನಗರ ಪಟ್ಟಣವಷ್ಟೇ ಅಲ್ಲ ಅಕ್ಕಪಕ್ಕದ ಗ್ರಾಮಗಳ ಜನ ಬಂದು ಈ ಹೆಲಿಕಾಪ್ಟರ್ ಅನ್ನು ನೋಡಿ ಹೋಗುತ್ತಿದ್ದಾರೆ...!

ಅಷ್ಟಕ್ಕೂ ಇದು ನಿಜವಾದ ಹೆಲಿಕಾಪ್ಟರ್ ಅಲ್ಲ?!.. ಕುಶಾಲನಗರದ ರಥಬೀದಿಯ ಗುತ್ತಿಗೆದಾರ ಡಿ.ಟಿ.ನಾಗೇಂದ್ರ, ಕಿರಣ್ ಇಂಜಿನಿಯರಿಂಗ್ ವರ್ಕ್‍ಶಾಪ್ ಮಾಲೀಕ ಡಿ.ಟಿ.ವಿಜೇಂದ್ರ, ಗಜಾನನ ಇಂಡಸ್ಟ್ರಿ ಮಾಲೀಕ ಡಿ.ಟಿ.ರವಿಕುಮಾರ್ ಅವರ ಆಲೋಚನೆಯಲ್ಲಿ ಕೊರೊನಾ ಸಂದರ್ಭದ ಲಾಕ್‍ಡೌನ್ ಸಮಯದಲ್ಲಿ ಹೊಳೆದ ಯೋಚನೆ ಹೆಲಿಕಾಪ್ಟರ್ ಒಂದನ್ನು ನಿರ್ಮಿಸಿದೆ. ಈ ಹೆಲಿಕಾಪ್ಟರ್ ಅನಂತ್‍ನಾಗ್ ಅಭಿನಯನದ ಹಳೆಯ ಚಲನಚಿತ್ರ ಬಯಲುದಾರಿಯಲ್ಲಿ ಇರುವ ಹೆಲಿಕಾಪ್ಟರ್ ಅನ್ನು ಹೋಲುವಂತೆ ನಿರ್ಮಿಸಲಾಗಿದೆ ಎನ್ನುತ್ತಾರೆ ಡಿ.ಟಿ.ವಿಜೇಂದ್ರ.

ಸುಮಾರು 500 ಕೆ.ಜಿ.ಯಷ್ಟು ತೂಕವಿರುವ, 25 ಅಡಿಗಳಷ್ಟು ಉದ್ದ ಹಾಗೂ 10 ಅಡಿ ಎತ್ತರದಲ್ಲಿ ಈ ಹೆಲಿಕಾಪ್ಟರ್ ಅನ್ನು ನಿರ್ಮಿಸಲಾಗಿದೆ. ಇದರ ಮೇಲೆ ನಾಲ್ಕು ಬೃಹತ್ ಫ್ಯಾನ್‍ಗಳನ್ನು ಅಳವಡಿಸಲಾಗಿದ್ದು ಈ ಫ್ಯಾನ್‍ಗಳು ಏಳು ಅಡಿ ಉದ್ದವಿವೆ.

ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಮನೆ ಮಾಲೀಕ ಡಿ.ಟಿ.ನಾಗೇಂದ್ರ ಅವರು, ನಾನು ಚಿಕ್ಕವನಿದ್ದಾಗ ನಮ್ಮ ಮನೆಯ ಪಕ್ಕದಲ್ಲಿ ವಾಸವಿದ್ದ ಮಾಜಿ ಮುಖ್ಯಮಂತ್ರಿ ದಿ. ಆರ್.ಗುಂಡೂರಾವ್ ಅವರು ಹೆಲಿಕಾಪ್ಟರ್‍ನಲ್ಲಿ ಬೆಂಗಳೂರಿನಿಂದ ಕುಶಾಲನಗರಕ್ಕೆ ಬರುತ್ತಿದ್ದರು. ಹೆಲಿಕಾಪ್ಟರ್ ಅನ್ನು ಸರ್ಕಾರಿ ಪಾಲಿಟೆಕ್ನಿಕ್ ಬಳಿ ಲ್ಯಾಂಡ್ ಮಾಡಲಾಗುತ್ತಿತ್ತು. ಆವಾಗ ನಾವೆಲ್ಲಾ ಹೋಗಿ ನೋಡಿ ಬರುತ್ತಿದ್ದೆವು. ಹಾಗಾಗಿ ಈ ಹೆಲಿಕಾಪ್ಟರ್ ಅನ್ನು ಸಿದ್ಧಪಡಿಸಿ ಮನೆಯ ಮೇಲೆ ಇಟ್ಟುಕೊಳ್ಳಬೇಕೆಂಬ ಹಂಬಲ ಇಂದು ನೆರವೇರಿದೆ ಎನ್ನುತ್ತಾರೆ.

ಹಾರಾಡುವ ಹೆಲಿಕಾಪ್ಟರ್‍ಅನ್ನು ಹೋಲುವಂತೆ ಮಾಡಿರುವ ಈ ಹೆಲಿಕಾಪ್ಟರ್ ಅನ್ನು ನಾಲ್ಕು ಅಂತಸ್ತಿನ ಮನೆಯ ಮೇಲ್ಛಾವಣಿಯ ಮೇಲೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಲ್ಲಿಸಲಾಗಿದೆ. ಇದು ಕುಶಾಲನಗರ ಪಟ್ಟಣ ಸೇರಿದಂತೆ ದೂರದ ಆವರ್ತಿ, ಕೊಪ್ಪ, ಮುಳ್ಳುಸೋಗೆ ಗ್ರಾಮಗಳಿಗೆ ಕಾಣಿಸುತ್ತಿದ್ದು, ಗಾಳಿಯ ರಭಸಕ್ಕೆ ಹೆಲಿಕಾಪ್ಟರ್ ಮೇಲಿನ ರೆಕ್ಕೆಗಳು ಹಾಗೂ ಫ್ಯಾನ್ ವೇಗದಲ್ಲಿ ತಿರುಗುವುದನ್ನು ನೋಡುವುದೇ ಒಂದು ವಿಸ್ಮಯಕಾರಿಯಾಗಿದೆ.

- ಕೆ.ಎಸ್. ಮೂರ್ತಿ