ಅಂಚೆ ಸೇವೆ ಇಂದು ವಿಶ್ವದಲ್ಲೇ ಪ್ರಮುಖ ಸೇವೆಯಾಗಿದೆ. ಇದು ಜನರ ಜೀವನದ ಅವಿಭಾಜ್ಯ ಸೇವೆಯೇ ಆಗಿದೆ. ವಿಷಯ ಸಂದೇಶ, ಶುಭಾಶಯ ಗಳು. ಮಾತ್ರವಲ್ಲದೆ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಳುಹಿಸುವಲ್ಲಿ ಅಂಚೆ ಇಲಾಖೆಯ ಸೇವೆ ವಿಶ್ವದಲ್ಲೇ ಭಾರೀ ಮಹತ್ವವನ್ನು ಪಡೆದಿದೆ. ಕಾರ್ಡು, ಲಕೋಟೆ, ಪತ್ರ ಪಾರ್ಸೆಲ್, ಸ್ಪೀಡ್ ಪೋಸ್ಟ್ಗಳು ಮೊದಲಾದವು ಅಂಚೆ ಇಲಾಖೆಯ ಪ್ರಮುಖ ಸೇವೆಗಳಾಗಿವೆ.
ಈಗಂತೂ ಅಂಚೆ ಇಲಾಖೆ ಠೇವಣಿ ಸಂಗ್ರಹ ಉಳಿತಾಯ ಖಾತೆ ಎ.ಟಿ.ಎಂ. ಮುಂತಾದ ಜನಸೇವಾ ಕಾರ್ಯಗಳನ್ನು ಮಾಡುತ್ತಿವೆ. ದಿನದಿಂದ ದಿನಕ್ಕೆ ಸೇವಾ ಸೌಲಭ್ಯಗಳು ವಿಸ್ತರಣೆಗೊಳ್ಳುತ್ತಲೇ ಇವೆ. ಅಂಚೆ ಇಲಾಖೆ ಮೂಲಕ ಬೇಕಾದವರಿಗೆ ಹಣವನ್ನು ಕಳುಹಿಸಬಹುದಾಗಿದೆ. ಹಿಂದೆ ಟೆಲಿಗ್ರಾಂ ಕೂಡ ಬಹಳ ಮಹತ್ವ ಪಡೆದಿದ್ದು, ಟೆಲಿಗ್ರಾಂ ಬಂದರೆ ಅದೊಂದು ಮಹತ್ವದ ಅಥವಾ ಗಂಭೀರ ವಿಷಯವೆಂದೇ ಪರಿಗಣಿಸಲಾಗುತ್ತಿತ್ತು. ಅಂದು ಅದು ಅತೀ ವೇಗದಲ್ಲಿ ತಲಪುವ ಸಂದೇಶ ಅಥವಾ ವಿಷಯ ಸಾರಾಂಶವು ಆಗಿತ್ತು. ಅಂಚೆ ಸೇವೆ ರಾಷ್ಟ್ರ ಮತ್ತು ವಿಶ್ವ ಸೇವಾ ವ್ಯಾಪ್ತಿಯನ್ನು ಹೊಂದಿದೆ.
1997ರ ಲೆಕ್ಕಚಾರದಂತೆ ಭಾರತದಾದ್ಯಂತ ಇರುವ ಅಂಚೆ ಕಚೇರಿಗಳ ಸಂಖ್ಯೆ 1,52,000. 6 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ರ, ಲಕೋಟೆ ಮುಂತಾದವುಗಳ ಮೇಲೆ ವಿತರಣೆಯ ವೆಚ್ಚವನ್ನು ಅಂಚೆ ಚೀಟಿಗಳ ರೂಪದಲ್ಲಿ ಅಂಟಿಸಿ, ಕಳುಹಿಸುವ ವ್ಯವಸ್ಥೆ ಅಂಚೆ ಇಲಾಖೆಯಲ್ಲಿದೆ. ಈ ಅಂಚೆ ಚೀಟಿಗಳಲ್ಲಿ ಪ್ರಸಿದ್ಧ ವ್ಯಕ್ತಿಗಳ ಇತರೆ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳಿರುತ್ತವೆ.
ಅಂಚೆ ಚೀಟಿಗಳನ್ನು ಸಂಗ್ರಹಿಸುವುದು. ಒಂದು ಉತ್ತಮ ಹವ್ಯಾಸ ವಾಗಿರುವುದು. ಇದನ್ನು ಹವ್ಯಾಸಗಳ ರಾಜ ಎಂದೂ ಕರೆಯುವರು. ಬಣ್ಣ -ಬಣ್ಣದ ಚಿತ್ತಾರದ ದೇಶ-ವಿದೇಶಗಳ ಅಂಚೆ ಚೀಟಿ ಸಂಗ್ರಹ ಒಂದು ಹವ್ಯಾಸವಾಗಿದೆ. ಈ ಹವ್ಯಾಸದ ಹುರುಪಿಗೆ ವಯಸ್ಸಿನ ಇತಿಮಿತಿಯಿರುವುದಿಲ್ಲ. ಶಾಲಾ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಹವ್ಯಾಸವನ್ನು ಬೆಳೆಸಿಕೊಳ್ಳಬಹುದು. ಬಿಡುವಿನ ವೇಳೆಯಲ್ಲಿ ಈ ಹವ್ಯಾಸ ಮನಸ್ಸಿಗೆ ಮುದ ನೀಡುವುದು. ಶಾಲಾ ಮಕ್ಕಳು ಈ ಹವ್ಯಾಸ ಬೆಳೆಸಿಕೊಂಡಲ್ಲಿ ಅವರಲ್ಲಿ ಜ್ಞಾನಶಕ್ತಿ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗುವುದರಲ್ಲಿ ಸಂದೇಹವಿಲ್ಲ. ಅಂಚೆಚೀಟಿಗಳಲ್ಲಿ ವ್ಯಕ್ತಿ, ವಸ್ತುಗಳು, ಫಲ-ಪುಷ್ಪ, ಪಶು-ಪಕ್ಷಿ, ಕವಿಗಳು ಸ್ವಾತಂತ್ರ್ಯ ಹೋರಾಟಗಾರರು ಇತರೆ ಮಹನೀಯರ ಭಾವಚಿತ್ರ, ರಾಷ್ಟ್ರದ ಧ್ವಜ, ಪಕ್ಷಿ, ಪ್ರಾಣಿ ಲಾಂಛನ ಮೊದಲಾದ ವಿಶೇಷತೆ ಹೊಂದಿರುವ ಅಂಚೆಚೀಟಿಗಳು ಸಂಗ್ರಹಕಾರರಲ್ಲಿ ಲಭ್ಯವಿರುತ್ತದೆ. ಜನರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ (ಅಂಚೆಯಣ್ಣ, ಪೋಸ್ಟ್ಮ್ಯಾನ್) ಜನರ ಪ್ರೀತಿಯನ್ನು ಗಳಿಸುತ್ತಾನೆ. ಅಂಚೆ ಕಚೇರಿಗಳಲ್ಲಿ ಸ್ಪೀಡ್ಪೊಸ್ಟ್ ಸೇವೆ, ರಿಜಿಸ್ಟ್ರಡ್ (ಖಾತರಿ) ಪೋಸ್ಟ್ ವಿತರಣಾ ಸೇವೆ ಕೂಡ ಇದೆ. ಇಂದು ಅಂಚೆ ಇಲಾಖೆ ಖಾಸಗಿ ಸೇವೆಯನ್ನು ಎದುರಿಸಬೇಕಾದ ಸವಾಲುಗಳಿವೆ. ಕೊರಿಯರ್ ಸೇವೆಯು ಪೈಪೋಟಿ ನೀಡುತ್ತಿದೆ. ಅಂಚೆ ಇಲಾಖೆಯಲ್ಲಿ ಇಂದು ಲಕ್ಷಾಂತರ ಜನ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದಿನಿಂದಲೂ ಜನರಿಗೆ ಅವಶ್ಯಕ ಮತ್ತು ಪ್ರಮುಖ ಸೇವೆಯಾಗಿ ಬೆಳೆದು ಬಂದ ಅಂಚೆ ಸೇವೆಯ ಹಾಗೂ ಸೇವಾ ಸಿಬ್ಬಂದಿಯನ್ನು ಈ ದಿನ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ.
-ಹರೀಶ್ ಸರಳಾಯ, ಮಡಿಕೇರಿ.