ವೀರಾಜಪೇಟೆ, ಅ. 8: ವೀರಾಜಪೇಟೆ ತಾಲೂಕಿನಾದ್ಯಂತ ಮನೆ ನಿವೇಶನ ರಹಿತ ಎಲ್ಲ ಆಯ್ದ ಫಲಾನುಭವಿಗಳಿಗೆ ಹಂತ ಹಂತವಾಗಿ ಹಕ್ಕು ಪತ್ರ ವಿತರಿಸಲಾಗುವುದು. ಎಂಟು ವರ್ಷಗಳ ಹಿಂದೆ ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು 94 ಸಿ.ನಲ್ಲಿ ಅರ್ಜಿ ಸಲ್ಲಿಸಿದಂತಹ ಫಲಾನುಭವಿಗಳಿಗೆ ಆದ್ಯತೆ ಮೇರೆ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ತಾಲೂಕು ಆಡಳಿತದಿಂದ ಇಲ್ಲಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹಕ್ಕುಪತ್ರ ವಿತರಿಸಿ ಮಾತನಾಡಿದ ಬೋಪಯ್ಯ ಅವರು ಪ್ರತಿಯೊಬ್ಬರಿಗೂ ಸೂರು ಯೋಜನೆಯಡಿಯಲ್ಲಿ ಮನೆ ನಿವೇಶನ ವಿತರಿಸಲಾಗುವುದು, ಫಲಾನುಭವಿಗಳು ಯಾವುದೇ ರೀತಿಯಲ್ಲಿ ಆತಂಕಪಡಬೇಕಾಗಿಲ್ಲ. ಕೋವಿಡ್-19 ಹಿನ್ನೆಲೆ ಸರಕಾರದ ಯೋಜನೆಗಳು ಜಾರಿಗೆ ತರುವುದರಲ್ಲಿ ವಿಳಂಬವಾಗಿದೆ. ಇಂದು ಕೊರೊನಾ ವೇಗವಾಗಿ ಹರಡುತ್ತಿದ್ದು ಎಲ್ಲರೂ ಮಾಸ್ಕ್ ಧರಸಿ ಸ್ವಯಂಪ್ರೇರಣೆಯಿಂದ ಕೊರೊನಾ ವೈರಸ್‍ನ್ನು ನಿಯಂತ್ರಿಸಿಕೊಳ್ಳಬೇಕಾಗಿದೆ ಎಂದರು.

ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಅಕ್ರಮ ಸಕ್ರಮ ಸಮಿತಿಯ ಗಿರೀಶ್ ಗಣಪತಿ, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್ ನಾಚಪ್ಪ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ಹಾಜರಿದ್ದರು.

ಇದೇ ಸಭೆಯಲ್ಲಿ 93 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಮಳೆ ಹಾನಿ ಸಂಬಂಧ 83 ಮಂದಿ ಸಂತ್ರಸ್ತರಿಗೆ ತಲಾ ರೂ 10,000 ದಂತೆ ಪರಿಹಾರ ಚೆಕ್ ವಿತರಿಸಲಾಯಿತು. ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂದಾಯ ಇನ್ಸ್‍ಪೆಕ್ಟರ್ ಪಳಂಗಪ್ಪ ಪ್ರಕಾಶ್ ನಿರೂಪಿಸಿದರು.