ಕೂಡಿಗೆ, ಅ. 8: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಸರಕಾರ ವಿವಿಧ ವಸತಿ ಯೋಜನೆಯ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ನಿವೇಶನ ರಹಿತರನ್ನು ಗ್ರಾಮ ಸಭೆಯಲ್ಲಿ ಆಯ್ಕೆಮಾಡಲಾಗಿತ್ತು. ಅದರಂತೆಯೇ ಗ್ರಾಮ ಪಂಚಾಯಿತಿ ನಿಯಮಗಳ ಆಧಾರದ ಮೇಲೆ ತಾಲೂಕು ಪಂಚಾಯತ್ ಒಪ್ಪಿಗೆಯ ಮೇರೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಆಶ್ರಯ ಯೋಜನೆ, ಇಂದಿರಾ ಯೋಜನೆ ಬಸವ ಯೋಜನೆ ಅನುಗುಣವಾಗಿ ಮನೆಗಳ ನಿರ್ಮಾಣಕ್ಕೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದೆ. ಆದರೆ ಇದುವರೆಗೂ 30ಕ್ಕೂ ಹೆಚ್ಚು ಮಂದಿಗೆ ಮನೆ ಹಣ ಬಾರದೆ ಮನೆ ಕಟ್ಡಡದ ಕಾಮಗಾರಿ ಅರ್ಧಕ್ಕೆ ನಿಂತಿವೆ.

ಕೆಲವರಿಗೆ ಮನೆಯ ಅಡಿಪಾಯದ ಹಣ ಬಂದರೆ, ಇನ್ನೂ ಕೆಲವರಿಗೆ ಕಟ್ಟಡ ಹಣ ಬಂದಿರುವುದಿಲ್ಲ. ಇದರಿಂದ ಇದನ್ನೇ ನಂಬಿರುವ ವಸತಿ ರಹಿತರು ಆತಂಕÀಕ್ಕೆ ಒಳಪಡುವಂತಾಗಿದೆ.

ಸರಕಾರದಿಂದ ಹಣ ಬಾರದೆ ಮನೆ ನಿರ್ಮಿಸಿಕೊಳ್ಳಲು ನಾವು ಶಕ್ತರಾಗಿಲ್ಲ ಎಂದು ಅನೇಕ ಫಲಾನುಭವಿಗಳು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಕ್ಷೇತ್ರದ ಶಾಸಕರು ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ ಹಣ ದೊರಕಿಸುವಂತೆ ಮಾಡಬೇಕೆಂದು ಫಲಾನುಭವಿಗಳ ಆಗ್ರಹವಾಗಿದೆ.

-ಕೆ. ಕೆ. ನಾಗರಾಜಶೆಟ್ಟಿ