ಮಡಿಕೇರಿ, ಅ. 9: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಯಿಂದ ಬಹುತೇಕ ಕಡೆಗಳಲ್ಲಿ ಕಾಫಿ ಫಸಲು ನಷ್ಟಗೊಂಡಿದೆ. ಆದರೆ ಈ ನಷ್ಟ ಸಮೀಕ್ಷೆಯಲ್ಲಿ ಕಾಫಿ ಮಂಡಳಿಯು ಕೆಲವಾರು ಗ್ರಾಮಗಳನ್ನು ಹೊರತಾಗಿರಿಸಿದ್ದು, ಇದರಿಂದ ಬೆಳೆಗಾರರಿಗೆ ಅನ್ಯಾಯವಾಗಿದೆ ಎಂದು ಆಕ್ಷೇಪಿಸಿ ಮಡಿಕೇರಿ ಸನಿಹದ ಕೆಲವು ಗ್ರಾಮಗಳ ಬೆಳೆಗಾರರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಾಫಿ ಮಂಡಳಿಯ ನಿಲುವಿ ನಿಂದಾಗಿ ವಿವಿಧ ಗ್ರಾಮಗಳ ಬೆಳೆಗಾರರು ನಷ್ಟ ಪರಿಹಾರದಿಂದಾಗಿ ವಂಚಿತರಾಗುವಂತಾಗಿದೆ. ಶೇ. 33ಕ್ಕೂ ಅಧಿಕ ಫಸಲು ನಷ್ಟಗೊಂಡಿರಬೇಕೆಂಬ ನಿಯಮ ಹಾಗೂ ಮಳೆಯ ಪ್ರಮಾಣವನ್ನು ಮುಂದಿಟ್ಟುಕೊಂಟು ಕಾಫಿ ಮಂಡಳಿ ಕೆಲವಾರು ಗ್ರಾಮಗಳನ್ನು ಕೈಬಿಟ್ಟಿದೆ. ಮಕ್ಕಂದೂರು, ಮರಗೋಡು, ಕಡಗದಾಳು, ಹಾಕತ್ತೂರು, ಬೆಟ್ಟಗೇರಿ, ಚೇರಂಬಾಣೆ ಕೆ. ನಿಡುಗಣೆ ವ್ಯಾಪ್ತಿಯ ಹಲವಾರು ಗ್ರಾಮಗಳು ಪಟ್ಟಿಯಿಂದ ಹೊರತಾಗಿ ರುವ ಕುರಿತು ಪ್ರತಿಭಟನಾ ಕಾರರು ಆಕ್ಷೇಪಿಸಿದರು. ಈ ಬಗ್ಗೆ ಮರು ಸಮೀಕ್ಷೆ ನಡೆಸಲು ಒತ್ತಾಯಿಸಿ ಇದಕ್ಕೆ ಸೂಚನೆ ನೀಡಲು ಜಿಲ್ಲಾಡಳಿತವನ್ನು ಒತ್ತಾಯಿಸಲಾಯಿತು. ಈ ಕುರಿತು ಅಪರ ಜಿಲ್ಲಾಧಿಕಾರಿ ಡಾ. ಸ್ನೇಹ ಅವರಿಗೆ ಮನವಿ ಸಲ್ಲಿಸಲಾಗಿದ್ದು, ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ. ಪ್ರತಿಭಟನೆಯಲ್ಲಿ ಬೆಳೆಗಾರರಾದ ರವಿಕುಶಾಲಪ್ಪ, ರವಿಬಸಪ್ಪ, ಸುಭಾಷ್ ಸೋಮಯ್ಯ, ಡೀನ್ ಬೋಪಣ್ಣ, ಕೋಡಿ ಪ್ರಸನ್ನ ಸೇರಿದಂತೆ ವಿವಿಧ ಗ್ರಾಮದ ಬೆಳೆಗಾರರು ಪಾಲ್ಗೊಂಡಿದ್ದರು.