ಮಡಿಕೇರಿ, ಅ. 8: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ದ್ವೇಷದ ರಾಜಕಾರಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಉದ್ದೇಶ ಪೂರ್ವಕ ಸಿಬಿಐ ದಾಳಿ ಹಾಗೂ ಉತ್ತರ ಪ್ರದೇಶದ ಹತ್ರಸ್‍ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪ್ರಮುಖರು ಮತ್ತು ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ನಗರದ ಗಾಂಧಿ ಮೈದಾನದಿಂದ ಮೆರವಣಿಗೆ ಮೂಲಕ ಪ್ರತಿಭಟನಾ ಜಾಥ ತೆರಳಲು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತಯಾರಿ ಮಾಡಿಕೊಂಡಿದ್ದರು. ಆದರೆ ಪ್ರತಿಭಟನಾ ಜಾಥಾಕ್ಕೆ ಪೊಲೀಸರು ಅನುಮತಿ ನಿರಾಕರಿಸಿದರು. ಮಾತ್ರವಲ್ಲದೆ ಶಾಂತಿಯುತ ಪ್ರತಿಭಟನೆ ನಡೆಸುವುದಾದರೆ ಮಾತ್ರವೇ ಅನುಮತಿ ನೀಡುವುದಾಗಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮುಖಂಡರಿಗೆ ತಿಳಿಸಿದರು. ಬಳಿಕ ಪ್ರತಿಭಟನಾ ಜಾಥಾವನ್ನು ಕೈ ಬಿಟ್ಟು ಕಾಂಗ್ರೆಸ್ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾವಣೆಗೊಂಡು ಬಿಜೆಪಿ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್, ಗುಜರಾತ್‍ನಲ್ಲಿ ಅಹಮದ್ ಪಟೇಲ್ ಅವರ ಗೆಲುವನ್ನು ತಡೆಯುವ ಸಲುವಾಗಿ ಬಿಜೆಪಿ ಮುಖಂಡರು ಕುದುರೆ ವ್ಯಾಪಾರ ನಡೆಸಿದ್ದರು. ಆ ಸಂದರ್ಭ ಇಂದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗುಜರಾತ್ ಶಾಸಕರನ್ನು ಒಗ್ಗೂಡಿಸಿ ಅವರಿಗೆ ರಕ್ಷಣೆ ನೀಡಿದ್ದರು. ಪರಿಣಾಮ ಅಹಮದ್ ಪಟೇಲ್ ಗೆಲ್ಲಲು ಸಾಧ್ಯವಾಯಿತು. ಈ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಿಬಿಐ, ಆದಾಯ
(ಮೊದಲ ಪುಟದಿಂದ) ತೆರಿಗೆ ಇಲಾಖೆ ಮತ್ತು ಇಡಿಯನ್ನು ಬಳಸಿ ಡಿಕೆಶಿ ಮನೆಯ ಮೇಲೆ ನಿರಂತರ ದಾಳಿ ನಡೆಸಿದೆ. ಇಂತಹ ದಾಳಿಗಳು ರಾಜಕೀಯ ಪ್ರೇರಿತ ಎಂಬುದು ಜನತೆಗೂ ತಿಳಿದಿದ್ದು, ಈ ದಾಳಿಗಳಿಂದ ಕಾಂಗ್ರೆಸ್‍ನ ನಾಯಕರು ಹೆದರುವುದಿಲ್ಲ ಎಂದು ಹೇಳಿದರು. ಕೊರೊನಾ ಸಂದರ್ಭ ರಾಜ್ಯ ಬಿಜೆಪಿ 2 ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಕೊಡಗು ಉಸ್ತುವಾರಿ ವೆಂಕಪ್ಪ ಗೌಡ ಮಾತನಾಡಿ, ಬಿಜೆಪಿ ಅನೈತಿಕ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಕೇವಲ ಡಿಕೆಶಿ ಮತ್ತು ಡಿ.ಕೆ. ಸುರೇಶ್ ಅವರ ಬಳಿ ಇರುವ ಹಣ ಮಾತ್ರವೇ ಬಿಜೆಪಿ ಹಾಗೂ ಸಿಬಿಐಗೆ ಕಾಣುತ್ತಿದೆ. ಕೇಂದ್ರ ಸಚಿವ ಹಾಗೂ ಮಾಜೀ ಮುಖ್ಯಮಂತ್ರಿ ಮತ್ತು ಹಾಲಿ ಸಂಸದೆಯ ಅಕ್ರಮಗಳು ಕಾಣುತ್ತಿಲ್ಲವೇ ಎಂದು ಸದಾನಂದ ಗೌಡ ಹಾಗೂ ಶೋಭಾ ಕರಂದ್ಲಾಜೆ ಅವರ ಹೆಸರು ಹೇಳದೇ ಕುಟುಕಿದರು. ಅವರ ಅಕ್ರಮ ಸಂಪತ್ತಿನ ಬಗ್ಗೆಯೂ ತನಿಖೆ ನಡೆಸಿ ಎಂದು ಒತ್ತಾಯಿಸಿದ ವೆಂಕಪ್ಪ ಗೌಡ ಸರಕಾರಕ್ಕೆ ನೈತಿಕತೆಯೇ ಇಲ್ಲ ಎಂದು ಟೀಕಿಸಿದರು. ಕಾಂಗ್ರೆಸ್‍ನ ಪ್ರತಿಭಟನೆಯನ್ನು ಹತ್ತಿಕ್ಕಲು ಎಲ್ಲ ಪ್ರಯತ್ನಗಳನ್ನು ಕೂಡ ಮಾಡಲಾಗುತ್ತಿದೆ. ಮೈಕ್ ಬಳಸದಂತೆ ತಡೆಯುವ ಹುನ್ನಾರವನ್ನೂ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್‍ನ ಹೋರಾಟದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿದ್ದು, ಯೋಗಿ ಸರಕಾರವೇ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ವೆಂಕಪ್ಪ ಗೌಡ ಅಂಕಿ ಅಂಶಗಳ ಸಹಿತ ಆರೋಪಿಸಿದರು.
ಕಾಂಗ್ರೆಸ್ ರಾಜ್ಯ ಸಂಚಾಲಕ ಟಿ.ಪಿ. ರಮೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ನಿರಂತರ ಪ್ರತಿಭಟನೆ ನಡೆಸಲಿದೆ. ಈ ಸರಕಾರ ತೊಲಗುವವರೆಗೂ ಹೋರಾಟಗಳು ಮುಂದುವರಿಯುತ್ತವೆ ಎಂದು ಹೇಳಿದರು.
ಎಂ.ಎಲ್.ಸಿ. ವೀಣಾ ಅಚ್ಚಯ್ಯ ಮಾತನಾಡಿ, ಬಿಜೆಪಿ ಸರಕಾರ ಅಸಹಾಯಕವಾಗಿ ನಿಂತಿದೆ. ಅಭಿವೃದ್ಧಿ ಕೆಲಸವಾಗಲಿ, ಅತ್ಯಾಚಾರ ನಿಲ್ಲಿಸುವ ಕೆಲಸವಾಗಲಿ, ರೈತರ ಬೇಡಿಕೆಯನ್ನು ಪರಿಗಣಿಸುವ ಕೆಲಸವಾಗಲಿ - ಬಿಜೆಪಿಯಿಂದ ಸಾಧ್ಯವಿಲ್ಲ. ಉಪಚುನಾವಣೆಯ ಸಮಯದಲ್ಲಿ ಇಲ್ಲದ ಅಪವಾದವನ್ನು ಸೃಷ್ಟಿಸುವದು ಬಿಜೆಪಿ ಪಕ್ಷದ ತಂತ್ರವಾಗಿದೆ. ಬಿಜೆಪಿ ಏನೇ ಪ್ರಯತ್ನಪಟ್ಟರೂ ಕಾಂಗ್ರೆಸ್‍ನನ್ನು ಒಡಿಯುವಂತ ಪ್ರಯತ್ನ ಫಲ ನೀಡುವದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಹೋರಾಟವನ್ನು ಮಾಡಬೇಕಾಗಿದೆ. ಸಂಪೂರ್ಣವಾಗಿ ವಿಫಲವಾದಂತ ರಾಜ್ಯ ಸರಕಾರವನ್ನು ಕಿತ್ತುಹಾಕುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ನುಡಿದರು.
ಮುಖಂಡರಾದ ಶಾಹಿದ್ ತೆಕ್ಕಿಲ್, ಕೊಲ್ಯದ ಗಿರೀಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ಸರಿತಾ ಪೂಣಚ್ಚ, ಕಾಂಗ್ರೆಸ್‍ನ ಮಾಜೀ ಅಧ್ಯಕ್ಷ ಶಿವು ಮಾದಪ್ಪ, ಸುರಯ್ಯ ಅಬ್ರಾರ್, ಯುವ ಮೋರ್ಚಾದ ನಗರ ಅಧ್ಯಕ್ಷ ಸದಾ ಮುದ್ದಪ್ಪ, ಡಿಸಿಸಿ
ಸದಸ್ಯ ಪುಷ್ಪ ಪೂಣಚ್ಚ, ಅಲ್ಪ ಸಂಖ್ಯಾತರ ಘಟಕದ ಅಬ್ದುಲ್ ರಝಾಕ್, ಮ್ಯಾಥ್ಯು, ಎಸ್.ಸಿ. ಘಟಕದ ಅಧ್ಯಕ್ಷ ಮುದ್ದುರಾಜ್, ತೆನ್ನೀರಾ ಮೈನಾ, ಸೂರಜ್ ಹೊಸೂರು, ಮಿನಾಝ್ ಪ್ರವೀಣ್, ಪ್ರಕಾಶ್ ಆಚಾರ್ಯ, ಪ್ರಭು ರೈ, ಉದಯ್ ಕುಮಾರ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.