ಮಡಿಕೇರಿ, ಅ. 8: ಒಂದೂವರೆ ವರ್ಷದ ಹಿಂದೆ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಪಾಜೆಯ ಸಹಕಾರಿ ಮುಖಂಡ ಬಾಲಚಂದ್ರ ಕಳಗಿ ಅವರನ್ನು ಕೊಲೆಗೈದಿರುವ ಪ್ರಕರಣದ ಸೂತ್ರಧಾರಿ ಎನ್ನಲಾದ ಕಲ್ಲುಗುಂಡಿ ಸಮೀಪದ ಗೂನಡ್ಕದ ದೊಡ್ಡಡ್ಕ ನಿವಾಸಿ ಸಂಪತ್ಕುಮಾರ್ (36) ಇಂದು ಬೆಳ್ಳಂಬೆಳಿಗ್ಗೆ ಸುಳ್ಯದ ಶಾಂತಿನಗರದಲ್ಲಿ ಭಯಾನಕ ರೀತಿಯಲ್ಲಿ ಹತ್ಯೆಗೊಳಗಾಗಿದ್ದಾನೆ.ಬಾಲಚಂದ್ರ ಕಳಗಿ ಅವರು 2019ರ ಮಾರ್ಚ್ 19 ರಂದು ಮಡಿಕೇರಿ ಸಮೀಪದ ಮೇಕೇರಿ ಮಾರ್ಗದಲ್ಲಿ ಮಾರುತಿ ವ್ಯಾನ್ನಲ್ಲಿ ಬರುತ್ತಿದ್ದಾಗ ದುಷ್ಕರ್ಮಿಗಳು ಲಾರಿಯೊಂದನ್ನು ಡಿಕ್ಕಿ ಪಡಿಸಿದ್ದರಿಂದ ಅಸುನೀಗಿದ್ದರು. ಈ ದುಷ್ಕøತ್ಯದ ಸೂತ್ರಧಾರಿ ಎನ್ನಲಾದ ಸಂಪತ್ಕುಮಾರ್ ಹಾಗೂ ಸಂಪಾಜೆಯ ಕೆ. ಹರಿಪ್ರಸಾದ್ ಮತ್ತು ದುಷ್ಕøತ್ಯಕ್ಕೆ ಸಹಕರಿಸಿದ್ದ ಲಾರಿ ಚಾಲಕ ಜಯ ಎಂಬವರುಗಳ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆಯೊಂದಿಗೆ ಈ ಮೂವರು ಬಂಧಿಸಲ್ಪಟ್ಟಿದ್ದು, ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
ಶಾಂತಿನಗರದಲ್ಲಿ ವಾಸ : ಜಾಮೀನಿನಲ್ಲಿ ಹೊರ ಬಂದಿದ್ದ ಆರೋಪಿಗಳ ಪೈಕಿ ಸಂಪತ್ಕುಮಾರ್ ಸುಳ್ಯದ ಶಾಂತಿನಗರದಲ್ಲಿ ಬಾಡಿಗೆಗೆ ಮನೆಯೊಂದನ್ನು ಪಡೆದು ಅಲ್ಲಿ ವಾಸಿಸುತ್ತಿದ್ದುದಾಗಿ ಗೊತ್ತಾಗಿದೆ. ಇಂದು ಬೆಳಿಗ್ಗೆ 6.30 ರಿಂದ 7.15ರ ಸುಮಾರಿಗೆ ನಾಲ್ಕೈದು ಮಂದಿ ಅಪರಿಚಿತರು ವ್ಯವಸ್ಥಿತ ರೀತಿಯಲ್ಲಿ ಹತ್ಯೆಗೈದಿದ್ದಾರೆ.
ಕಾರಿನಲ್ಲೇ ಕೊಲೆ ಯತ್ನ : ಇಂದು ಬೆಳಿಗ್ಗೆ ಸಂಪತ್ಕುಮಾರ್ ತನ್ನ (ಐ-20) ಕಾರಿನಲ್ಲಿ (ಕೆ.ಎ. 21. ಪಿ. 6807) ಶಾಂತಿನಗರ ಮನೆಯಿಂದ ಸುಮಾರು 100 ಮೀಟರ್ ದೂರ ಬಂದಿದ್ದಾನೆ. ಈ ವೇಳೆ ರಸ್ತೆ ತಿರುವಿನ ಏರುಮಾರ್ಗದಲ್ಲಿ ಅಪರಿಚಿತರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕಾರಿನ ಗಾಜುಗಳನ್ನು ಪುಡಿಗಟ್ಟಿ ಕೊಲೆಗೆ ಯತ್ನಿಸಿದ್ದಾರೆ. ಹಠಾತ್ ಧಾಳಿಯಿಂದ ವಿಚಲಿತನಾದ ಸಂಪತ್ಕುಮಾರ್ ಪ್ರಾಣ ರಕ್ಷಣೆಗೆ ಮುಂದಾಗಿದ್ದಾನೆ. ಈ ಸಂದರ್ಭ ಕಾರು ಹಿಂದಕ್ಕೆ ಚಲಿಸಿ ಮನೆಯೊಂದರ ಗೇಟ್ಗೆ ಡಿಕ್ಕಿಯಾಗಿ ನಿಲುಗಡೆಗೊಂಡಿದೆ.
ತಪ್ಪಿಸಿಕೊಳ್ಳಲು ಯತ್ನ : ಮರು ಕ್ಷಣದಲ್ಲಿ ಕಾರಿನಿಂದ ಇಳಿದಿರುವ ಸಂಪತ್, ಅಲ್ಲಿನ ನಿವಾಸಿ ಇಬ್ರಾಹಿಂ ಅವರ ಅಂಗಳಕ್ಕಾಗಿ ದಾಟಿ ಹಿಂಬದಿಯ ತೋಟಕ್ಕಾಗಿ ಓಡಿಹೋಗಿದ್ದಾನೆ. ಮರುಕ್ಷಣ ಹಂತಕರಲ್ಲೊಬ್ಬ ಗುಂಡು ಹಾರಿಸಿರುವ ಶಬ್ಧ ಕೇಳಿಸಿದೆ. ಗುಂಡೇಟಿನಿಂದ ಪಾರಾದ ಸಂಪತ್, ಪ್ರಾಣಾಪಾಯದಿಂದ ತನ್ನ ಮನೆಗೆ ಓಡಲಾರದೆ, ಸಮೀಪವೇ ಇರುವ ಪದ್ಮನಾಭ (ಪುಟ್ಟಣ್ಣ) ಎಂಬವರ ಮನೆಯೊಳಗೆ ಹೊಕ್ಕಿದ್ದಾನೆ.
ಒಳಗೆ ಅಕ್ಕಿ ರುಬ್ಬುತ್ತಿದ್ದ ಮನೆಯೊಡತಿ ಶೀಲ ಏನೆಂದು ನೋಡುವಷ್ಟರಲ್ಲಿ ಕೆಳಗೆ ಬಿದ್ದ ಸಂಪತ್ ತಲೆಗೆ ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಆಘಾತಗೊಂಡ ತಿಮ್ಮಪ್ಪ : ಈ ಧಾಳಿಯಿಂದ ಆಘಾತಗೊಂಡ ಪದ್ಮನಾಭ ಅವರ ಅಣ್ಣ ಪಕ್ಕದ ಮನೆಯ ತಿಮ್ಮಪ್ಪ, ತನ್ನ ತಮ್ಮನ ಮೇಲೆ ಯಾರೋ ಹಲ್ಲೆ ನಡೆಸುತ್ತಿರುವದಾಗಿ ಗಾಬರಿಯಿಂದ ಓಡಿ ಬಂದಿದ್ದಾರೆ. ಈ ಸಂದರ್ಭ ದುಷ್ಕರ್ಮಿಯೊಬ್ಬ ಅವರ ಎಡಗೈಗೆ ಕತ್ತಿ ಬೀಸಿ ಘಾಸಿಗೊಳಿಸಿದ್ದಾನೆ.
ಬಾಗಿಲು ಮುಚ್ಚಿ ರಕ್ಷಣೆ ಯತ್ನ : ಸಂಪತ್ಕುಮಾರ್ ಅನ್ನು ಬೆನ್ನಟ್ಟಿ ಬಂದ ಅಪರಿಚಿತರಿಂದ ರಕ್ಷಿಸುವ ಪ್ರಯತ್ನವೆಂಬಂತೆ ಮನೆಯ ಬಾಗಿಲು ಮುಚ್ಚುವಷ್ಟರಲ್ಲಿ, ಬಾಗಿಲನ್ನು ಒದ್ದು ಒಳನುಗ್ಗಿರುವ ದುಷ್ಕರ್ಮಿಗಳು ಸಂಪತ್ ತಲೆಗೆ ಬಲವಾಗಿ ಕಡಿದುದಲ್ಲದೆ, ಮತ್ತೊಂದು
(ಮೊದಲ ಪುಟದಿಂದ) ಗುಂಡು ಹೊಡೆದಿರುವದಾಗಿ ಗೊತ್ತಾಗಿದೆ. ಈ ಗಲಾಟೆಯೊಂದಿಗೆ ಗುಂಡಿನ ಶಬ್ಧ, ಕಿರುಚಾಟ ಕೇಳಿದ ಅಕ್ಕಪಕ್ಕದ ಮಂದಿ ದುಷ್ಕøತ್ಯ ಸಂಭವಿಸಿದ ಪದ್ಮನಾಭ ಅವರ ಮನೆಯತ್ತ ಧಾವಿಸಿ ಬಂದಿದ್ದಾರೆ. ಆ ವೇಳೆಗೆ ರಕ್ತದ ಮಡುವಿನಲ್ಲಿ ಸಂಪತ್ ಹೆಣವಾಗಿದ್ದನ್ನು ಖಚಿತಪಡಿಸಿ ಕೊಂಡು ಕೊಲೆ ಗಡುಕರು ಅಲ್ಲಿಂದ ಪರಾರಿಯಾಗಲು ಮುಂದಾಗಿದ್ದಾರೆ.
ಪ್ರತೀಕಾರ ತೆಗೆದು ಕೊಂಡಿದ್ದೇವೆ?: ಕತ್ತಿ ಏಟಿನಿಂದ ಗಾಯಗೊಂಡ ತಿಮ್ಮಪ್ಪ ಹಾಗೂ ಮನೆಯೊಡತಿ ಶೀಲ, ‘ಯಾಕೆ? ಏನು ಮಾಡುತ್ತಿದ್ದೀರಿ?’ ಎಂದು ಭಯದಿಂದ ಪ್ರಶ್ನಿಸಲಾಗಿ ‘ಬಾಲಚಂದ್ರ ಕಳಗಿ ಅವರನ್ನು ಕೊಲೆಗೈದಿದ್ದ ಸಂಪತ್ಕುಮಾರ್ ವಿರುದ್ಧ ಪ್ರತೀಕಾರ ತೆಗೆದು ಕೊಂಡಿದ್ದೇವೆ’ ಎಂದು ಹಂತಕನೊಬ್ಬ ಹೇಳಿದ್ದಾನೆ.
ಪೊಲೀಸರಿಗೆ ಸುಳಿವು : ಈ ತಂಡದ ಒಬ್ಬಾತನನ್ನು ಅಕ್ಕಪಕ್ಕ ಮಂದಿ ಹಿಡಿದುಕೊಂಡು ಕೂಡಲೇ ಸುಳ್ಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೆಲವರು ಆತನಿಗೆ ಥಳಿಸಿ, ಹಳೆಯ ಕೋವಿಯೊಂದನ್ನು ಕಿತ್ತುಕೊಂಡಿದ್ದಾರೆ. ಆ ಸಂದರ್ಭ ಹಂತಕರು ಮತ್ತೊಂದು ಕೋವಿ ಹಾಗೂ ಮಾರಕಾಸ್ತ್ರ ತೋರಿಸಿ ಆತನನ್ನು ಬಿಡಿಸಿಕೊಂಡು ಹೋದುದ್ದಾಗಿಯೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಬೆಚ್ಚಿದ ಶಾಂತಿನಗರ : ಬೆಳ್ಳಂಬೆಳಿಗ್ಗೆ ಎದುರಾದ ಭಯಾನಕ ಹತ್ಯೆಯಿಂದ ಶಾಂತಿನಗರ ಜನತೆ ಬೆಚ್ಚಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ತಾವು ಕಂಡು ಕೇಳಿರುವ ದೃಶ್ಯವನ್ನು ಹಂಚಿಕೊಳ್ಳುತ್ತಿದ್ದ ಚಿತ್ರಣ ಕಂಡು ಬಂತು. ಸುಳ್ಯ ಸುತ್ತಮುತ್ತಲಿನ ನೂರಾರು ಮಂದಿ ಕುತೂಹಲದೊಂದಿಗೆ ಧಾವಿಸಿ ಕೊಲೆ ದೃಶ್ಯ ನೋಡಿ ಹಿಂತೆರಳುತ್ತಿದ್ದರು.
ದಕ್ಷಿಣಕನ್ನಡ ಎಎಸ್ಪಿ ಲಕನ್ಸಿಂಗ್ ಯಾದವ್ ನೇತೃತ್ವದಲ್ಲಿ ಸುಳ್ಯ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರ ಸಹಿತ ಮೃತದೇಹದೊಂದಿಗೆ ಸ್ಥಳದಲ್ಲಿ ಲಭಿಸಿರುವ ಕೋವಿ ಇತ್ಯಾದಿಯ ಮಹಜರು ನಡೆಸಿ, ಕಾನೂನು ಕ್ರಮ ಜರುಗಿಸುವ ಮೂಲಕ ಶವವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಯೊಂದಿಗೆ ಮುಂದಿನ ತೀರ್ಮಾನಕೈಗೊಂಡರು.