ಮಡಿಕೇರಿ ಅ.8 : ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರದ ಬಗ್ಗೆ ಕಳೆದ ಒಂದು ತಿಂಗಳಿನಿಂದ ಗೊಂದಲಗಳು ಸೃಷ್ಟಿಯಾಗಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತಿವೆ. ಭಕ್ತರ ಮನಸ್ಸಿಗೆ ಘಾಸಿಯಾಗುವ ಹೇಳಿಕೆಗಳು ಕೇಳಿ ಬರುತ್ತಿದ್ದು, ಇದೊಂದು ಸೂಕ್ಷ್ಮ ವಿಚಾರವಾಗಿ ಮಾರ್ಪಟ್ಟಿರುವುದು ವಿಷಾದಕರವೆಂದು ಬೇಸರ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಜವಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲೆಯ ಇಬ್ಬರು ಶಾಸಕರು ಮಧ್ಯ ಪ್ರವೇಶ ಮಾಡಿ ಗೊಂದಲಗಳನ್ನು

(ಮೊದಲ ಪುಟದಿಂದ) ನಿವಾರಿಸಬೇಕೆಂದು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡವರು ಹಾಗೂ ಅರೆಭಾಷೆ ಗೌಡರು ಬಹಳ ವರ್ಷಗಳ ಹಿಂದಿನಿಂದಲೂ ಅಣ್ಣ ತಮ್ಮಂದಿರಂತೆ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ ಇತ್ತೀಚೆಗೆ ತಲಕಾವೇರಿ ಕ್ಷೇತ್ರದ ವಿಚಾರದಲ್ಲಿ ಕೆಲವರಲ್ಲಿ ಭಿನ್ನಾಭಿ ಪ್ರಾಯಗಳು ಮೂಡಿ ಗೊಂದಲ ಸೃಷ್ಟಿಯಾಗಿರುವುದು ಬೇಸರದ ವಿಚಾರವಾಗಿದೆ ಎಂದರು.ಕಾವೇರಿಮಾತೆ ತೀರ್ಥರೂಪಿಣಿ ಯಾಗಿ ಪ್ರತ್ಯಕ್ಷಳಾಗುವ ಕಾವೇರಿ ತುಲಾಸಂಕ್ರಮಣದ ಒಂದು ತಿಂಗಳ ಕಾಲ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ವಿವಿಧ ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತವೆ. ಇದು ಈ ಹಿಂದಿನಂತೆ ಮುಂದುವರೆಯಬೇಕು ಎನ್ನುವುದು ನಮ್ಮ ಅಪೇಕ್ಷೆ. ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ನಿಧನದ ನಂತರ ಕೇತ್ರದ ಪೂಜಾ, ವಿಧಿವಿಧಾನಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಪರ, ವಿರೋಧ ಗುಂಪುಗಳು ಆರೋಪ, ಪ್ರತ್ಯಾರೋಪದಲ್ಲಿ ತೊಡಗಿಕೊಂಡ ಕಾರಣ ಭಕ್ತರಲ್ಲಿ ಗೊಂದಲದ ವಾತಾವರಣ ಮೂಡಿದೆ. ಇದೆಲ್ಲವೂ ನಿವಾರಣೆಯಾಗಬೇಕಾದರೆ ಕೊಡವ ಮತ್ತು ಗೌಡ ಸಮುದಾಯದ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯ ಅವರುಗಳು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಗಿದೆ. ಎಲ್ಲಾ ಜನಾಂಗದ ಸಭೆ ಕರೆದು ಸಾಂಪ್ರದಾಯಿಕ ಆಚರಣೆಗಳು ಪ್ರತಿವರ್ಷ ಹೇಗೆ ನಡೆದುಕೊಂಡು ಬರಬೇಕು ಮತ್ತು ಕ್ಷೇತ್ರದ ಪಾವಿತ್ರ್ಯತೆ ಯನ್ನು ಹೇಗೆ ಉಳಿಸಿಕೊಂಡು ಹೋಗಬೇಕು ಎನ್ನುವ ಬಗ್ಗೆ ಸೂತ್ರಗಳನ್ನು ಸಿದ್ಧಪಡಿಸಬೇಕು ಎಂದು ವೀಣಾಅಚ್ಚಯ್ಯ ಒತ್ತಾಯಿಸಿದರು.

ಉಡುಗೆ ಬಗ್ಗೆ ಚರ್ಚೆ ಸರಿಯಲ್ಲ : ಸಾಂಪ್ರದಾಯಿಕ ಉಡುಗೆ ಬಗ್ಗೆ ಚರ್ಚೆಗಳು ನಡೆಯುವುದು ಅಷ್ಟು ಸಮಂಜಸವಲ್ಲ. ಯಾವುದೇ ದೇವಾಲಯಗಳಿಗೆ ತೆರಳುವಾಗ ತಮ್ಮ ತಮ್ಮ ಸಂಪ್ರದಾಯದಂತೆ ಉಡುಗೆ ತೊಟ್ಟು ಭಕ್ತಿಯನ್ನು ಮೆರೆಯಲು ಅವಕಾಶವಿದೆ. ಕ್ಷೇತ್ರದ ಭಾವನೆಗೆ ದಕ್ಕೆ ತರಬಹುದಾದ ಉಡುಗೆಗಳನ್ನು ತೊಡುವುದಕ್ಕಷ್ಟೇ ಆಕ್ಷೇಪಗಳಿರುವುದು ಸಹಜ ಎಂದು ವೀಣಾಅಚ್ಚಯ್ಯ ಅಭಿಪ್ರಾಯಪಟ್ಟರು.

ಶಿವಲಿಂಗಕ್ಕೆ ಸ್ಥಾನ : ಅಗಸ್ತ್ಯ ಮುನಿಗಳು ತಲಕಾವೇರಿಯಲ್ಲಿ ಸ್ಥಾಪಿಸಿರುವ ಶಿವಲಿಂಗವು ಇಂದು ನೆಲೆ ಇಲ್ಲದೆ ಯಾವುದೋ ಒಂದು ಸ್ಥಳದಲ್ಲಿ ಇಡಲ್ಪಟ್ಟಿದ್ದು, ಈ ಲಿಂಗದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಧಾನ ಪರಿಷತ್‍ನಲ್ಲಿ ಮುಜರಾಯಿ ಸಚಿವರು ಕ್ರಮದ ಭರವಸೆ ನೀಡಿದ್ದರೂ ಆಡಳಿತ ಪಕ್ಷದ ಇಬ್ಬರು ಶಾಸಕರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅತ್ಯಂತ ಶೀಘ್ರವಾಗಿ ಲಿಂಗಕ್ಕೆ ಗೌರವಯುತ ಸ್ಥಾನ ಕಲ್ಪಿಸಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅರೆಭಾಷೆ ಸಾಹಿತ್ಯ, ಸಂಸ್ಕøತಿ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪ್ರಮುಖ ಕೊಲ್ಯದ ಗಿರೀಶ್, ಬಾಬು, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್ ಮತ್ತು ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.