ವೀರಾಜಪೇಟೆ, ಅ. 8 :ಕೊಳಗೇರಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹರಿಕೇರಿ ಹಾಗೂ ಸುಂಕದಕಟ್ಟೆ ಕೊಳಚೆ ಪ್ರದೇಶಗಳಲ್ಲಿ ಕಾಂಕ್ರಿಟ್ ರಸ್ತೆ, ಕಾಂಕ್ರಿಟ್ ಮೆಟ್ಟಿಲುಗಳು, ಚರಂಡಿಗಳನ್ನು ನಿರ್ಮಿಸಲಾಗುವುದು ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.
ಪಟ್ಟಣ ಪಂಚಾಯಿತಿಯಿಂದ ಹರಿಕೇರಿಯಲ್ಲಿ ಅಂದಾಜು ರೂ. 25 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಸದಸ್ಯ ರಜನಿಕಾಂತ್ ಮಾತನಾಡಿ ಹರಿಕೇರಿಯಲ್ಲಿ 30ಕ್ಕೂ ಅಧಿಕ ಮನೆಗಳಿದ್ದು ಬಹುತೇಕ ಮನೆಗಳು ಕಲ್ನಾರು ಶೀಟಿನದ್ದಾಗಿದೆ. ಅವುಗಳನ್ನು ತೆಗೆದು ಆರ್.ಸಿ.ಸಿ. ಮನೆಗಳನ್ನು ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ಇಲ್ಲಿರುವ 5 ಮನೆಗಳಿಗೆ ಹಕ್ಕು ಪತ್ರಗಳಿಲ್ಲ. ಖಾಸಗಿ ವ್ಯಕ್ತಿಯೊಬ್ಬರು ನಮ್ಮ ಜಾಗ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿ ದ್ದಾರೆ. ಅದನ್ನು ಸರಿ ಪಡಿಸಿಕೊಡಬೇಕು ಎಂದು ಹೇಳಿದಾಗ ಶಾಸಕರು ನೀವು ಕೂಡ ನ್ಯಾಯಾಲಯಕ್ಕೆ ಹೋಗಿ ಎಂದು ಹೇಳಿದರು.
ಇದೇ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಡಿ.ಸಿ.ಸಿ ಬ್ಯಾಂಕ್ ಸದಸ್ಯ ರಘುನಾಣಯ್ಯ, ಕೊಳಗೇರಿ ಅಭಿವೃದ್ಧಿ ನಿಗಮದ ಜಂಟಿ ನಿರ್ದೇಶಕಿ ತೇಜಶ್ರೀ, ಮುಖ್ಯಾಧಿಕಾರಿ ಎ.ಎಂ ಶ್ರೀಧರ್, ಸದಸ್ಯೆ ಸುಶ್ಮಿತಾ ಮತ್ತಿತರರು ಹಾಜರಿದ್ದರು.