ವೀರಾಜಪೇಟೆ, ಅ. 8: ವೀರಾಜಪೇಟೆ ವಿಭಾಗದಲ್ಲಿ ಕೆರೆ ನಿರ್ಮಾಣ ಮಾಡುವಾಗ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಜಾಗದ ಕೆರೆಯ ಮಾಲೀಕರಿಂದ ಒಟ್ಟು ಅರ್ಧ ಎಕರೆಗೂ ಅಧಿಕ ಪೈಸಾರಿ ಜಾಗವನ್ನು ಸರ್ವೇ ಮಾಡಿ ಕಂದಾಯ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ವೀರಾಜಪೇಟೆ ವಿಭಾಗದ ಅರಮೇರಿಯಲ್ಲಿ ಕೆರೆ ನಿರ್ಮಾಣ ಮಾಡಿ ಒತ್ತುವರಿ ಮಾಡಿಕೊಂಡಿದ್ದ 28 ಸೆಂಟು ಪೈಸಾರಿ ಜಾಗ, ದೇವಣಗೇರಿ ಗ್ರಾಮದಲ್ಲಿ 22 ಸೆಂಟು ಹಾಗೂ ವಿ.ಬಾಡಗದ ನಾಲ್ಕೇರಿ ಗ್ರಾಮದಲ್ಲಿ 18 ಸೆಂಟುಗಳಷ್ಟು ಜಾಗವನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ. ಒತ್ತುವರಿ ಮಾಡಿದ ಜಾಗವನ್ನು ಸಂಬಂಧಿಸಿದ ಕದನೂರು, ದೇವಣಗೇರಿ ಹಾಗೂ ನಾಲ್ಕೇರಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ ವಶಕ್ಕೆ ಮುಂದಿನ ಕ್ರಮಕ್ಕಾಗಿ ನೀಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಸರಕಾರದ ಆದೇಶದಂತೆ ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ಅವರ ನಿರ್ದೇಶನದ ಮೇರೆಗೆ ಕೆರೆ ಒತ್ತುವರಿಯ ಜಾಗವನ್ನು ತೆರವುಗೊಳಿಸಲಾಗಿದೆ. ಈ ಸಂದರ್ಭ ಈ ವಿಭಾಗದ ಕಂದಾಯ ಅಧಿಕಾರಿ ಪಳಂಗಪ್ಪ ಪ್ರಕಾಶ್. ಸರ್ವೇಯರ್ಗಳು, ಸಿಬ್ಬಂದಿಗಳು ಹಾಜರಿದ್ದರು.