ಸೋಮವಾರಪೇಟೆ, ಅ. 8: ಅಪ್ರಾಪ್ತೆಯೋರ್ವಳು ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಸಮೀಪದ ಸಜ್ಜಳ್ಳಿ ಹಾಡಿಯ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ.
ಅಪ್ರಾಪ್ತ ಬಾಲಕಿಯೊಂದಿಗೆ ಆಕೆಯ ಚಿಕ್ಕಪ್ಪನ ಮಗ, ಸಜ್ಜಳ್ಳಿ ಹಾಡಿಯ ಗಣೇಶ ಎಂಬಾತ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭವತಿಯಾಗಿದ್ದು, ಈ ಬಗ್ಗೆ ಚೈಲ್ಡ್‍ಲೈನ್ ಸಂಸ್ಥೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಸಚಿನ್ ಸುವರ್ಣ ಅವರು ನೀಡಿದ ದೂರಿನ ಮೇಲೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಎಸ್.ಸಿ. ವಿರೂಪಾಕ್ಷ ಅವರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಗರ್ಭವತಿಯಾಗಿರುವ ಅಪ್ರಾಪ್ತೆಯನ್ನು ರಕ್ಷಿಸಿ ಬಾಲಮಂದಿರದಲ್ಲಿ ಉಪಚರಿಸಲಾಗುತ್ತಿದೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.