ಕುಶಾಲನಗರ, ಅ. 9: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಕೊಡಗು ಜಿಲ್ಲಾ ಡಾ.ಬಿ.ಆರ್. ಅಂಬೇಡ್ಕರ್ ಜನಪರ ವೇದಿಕೆ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ವೇದಿಕೆ ಅಧ್ಯಕ್ಷ ಎಚ್.ಸಿ. ಜಯಪ್ರಕಾಶ್ ನೇತೃತ್ವದಲ್ಲಿ ಕುಶಾಲನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಉತ್ತರಪ್ರದೇಶ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸಿ ಎಂದು ಘೋಷಣೆ ಕೂಗಿದರು.
ಈ ಸಂದರ್ಭ ಮಾತನಾಡಿದ ಎಚ್.ಸಿ.ಜಯಪ್ರಕಾಶ್, ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆಸಿದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವೇದಿಕೆ ಪ್ರಧಾನ ಕಾರ್ಯದರ್ಶಿ ಜೈನುಲ್ ಆಬಿದ್, ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಶೋಕ್ ಮಾತನಾಡಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಫಾತಿಮ, ಉಪಾಧ್ಯಕ್ಷ ಇಬ್ರಾಹಿಂ, ತಾಲೂಕು ಅಧ್ಯಕ್ಷ ಆದಂ, ಪ್ರಮುಖರಾದ ಮಹದೇವ್, ಚಂದನ್ ಮತ್ತಿತರರು ಇದ್ದರು.