ಶನಿವಾರಸಂತೆ, ಅ. 7: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರು ಜವಾಬ್ದಾರಿ ಅರಿತು, ಅವರವರ ಆರೋಗ್ಯದ ಬಗ್ಗೆ ಅವರೇ ಎಚ್ಚರ ವಹಿಸಬೇಕು ಎಂದು ಕೊಡ್ಲಿಪೇಟೆ ವಾಣಿಜ್ಯೋದ್ಯಮಿಗಳ ಸಂಘ ಸ್ಥಾನೀಯ ಸಮಿತಿ ಅಧ್ಯಕ್ಷ ಎಚ್.ಸಿ. ಯತೀಶ್ ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣ ಹಾಗೂ ಹೋಬಳಿ ಯಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆ ವಾಣಿಜ್ಯೋದ್ಯಮಿಗಳ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಖ್ಯವಾಗಿ ವ್ಯಾಪಾರಿಗಳು ಜವಾಬ್ದಾರಿ ಅರಿಯಬೇಕು.

ಕ್ಯಾಂಟೀನ್, ಬೇಕರಿ, ಪಾನಿಪೂರಿ ಮಾಲೀಕರು ಕೇವಲ ಪಾರ್ಸಲ್ ಮುಖಾಂತರ ವ್ಯವಹರಿಸ ಬೇಕು. ಗ್ರಾಹಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳುವಂತೆ ಗಮನಹರಿಸಬೇಕು. ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಪೊಲೀಸ್ ಅಧಿಕಾರಿ ಗಳು, ಕಂದಾಯ ಇಲಾಖೆ ಹಾಗೂ ಪಂಚಾಯಿತಿ ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ. ಸಾರ್ವಜನಿಕರು ಅಧಿಕಾರಿಗಳ, ವಾರಿಯರ್ಸ್‍ಗಳ, ಜನಪ್ರತಿನಿಧಿಗಳ ಶ್ರಮವನ್ನು ಅರಿತು ಆರೋಗ್ಯದ ಬಗ್ಗೆ ಜಾಗೃತರಾಗಬೇಕು ಎಂದು ಎಚ್ಚರಿಸಿದರು.

ಜಿಲ್ಲಾ ಸಮಿತಿ ನಿರ್ದೇಶಕ ಜಿ.ಆರ್. ಸುಬ್ರಮಣ್ಯ ಮಾತನಾಡಿ, ಕೊರೊನಾ ವೈರಸ್ ನಿಗ್ರಹಕ್ಕಾಗಿ ಸಂಘದ ವತಿಯಿಂದ ಪಟ್ಟಣದಲ್ಲಿ 5 ಬಾರಿ ಪ್ರಚಾರ ಮಾಡಲಾಗಿದೆ. ಅಂಗಡಿಮುಂಗಟ್ಟುಗಳ ಮುಂಭಾಗ ತ್ಯಾಜ್ಯಗಳನ್ನು ಹಾಕಲಾಗುತ್ತಿದೆ. ಹೇಮಾವತಿ ನದಿ ಹಿನ್ನೀರಿನಿಂದಾಗಿ ದಡದಲ್ಲಿ ಸೊಳ್ಳೆಗಳು ಹೆಚ್ಚಾಗಿವೆ. ಗ್ರಾ.ಪಂ. ಅಧಿಕಾರಿಗಳು ಪಟ್ಟಣ ಸ್ವಚ್ಛತೆ ಬಗ್ಗೆ, ಬೀದಿ ಬದಿ ಅಂಗಡಿಗಳ ತೆರವಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಜಿಲ್ಲಾಡಳಿತದ ಅಧಿಕಾರಿಗಳು ಖುದ್ದಾಗಿ ಕೊಡ್ಲಿಪೇಟೆ ಪಟ್ಟಣಕ್ಕೆ ಭೇಟಿ ನೀಡಿ ಪರಿಸ್ಥಿತಿ ಹಾಗೂ ಸಮಸ್ಯೆಯನ್ನು ಬಗೆಹರಿಸ ಬೇಕು ಎಂದು ಆಗ್ರಹಿಸಿದರು. ಕಾರ್ಯದರ್ಶಿ ಎಚ್.ಎಂ. ದಿವಾಕರ, ನಿರ್ದೇಶಕರಾದ ಬಿ.ಕೆ. ಯತೀಶ್, ಎಚ್.ಜೆ. ಪ್ರವೀಣ್ ಹಾಗೂ ಕರವೇ ಹೋಬಳಿ ಘಟಕದ ಅಧ್ಯಕ್ಷ ಭೂಪಾಲ್ ಮಾತನಾಡಿದರು. ಮಿಲ್ ದಿನೇಶ್ ಇತರರು ಹಾಜರಿದ್ದರು.