ಮಡಿಕೇರಿ, ಅ. 7: ನಿಯಮ ಮೀರಿ ಹಣ ಸಂಪಾದಿಸಿದ ಆರೋಪದಡಿ ಪ್ರಕರಣಗಳನ್ನು ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪರ ಜಿಲ್ಲಾ ಕಾಂಗ್ರೆಸ್ ಸಮಿತಿ ಅ.8 ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಅರ್ಥಹೀನವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಟೀಕಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷ ಮಾತ್ರ ಭ್ರಷ್ಟರಿಗೆ ಕುಮ್ಮಕ್ಕು ನೀಡುವ ಕಾರ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಇ.ಡಿ ಮತ್ತು ಸಿಬಿಐ ಕಾನೂನಿನ ಪ್ರಕಾರವೇ ತನ್ನ ಕಾರ್ಯವನ್ನು ಮಾಡುತ್ತಿದ್ದು, ಅದೇ ಪ್ರಕಾರವಾಗಿ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೂ ದಾಳಿ ನಡೆದಿದೆ. ಆದರೆ ಈ ದಾಳಿ ಬಿಜೆಪಿ ಪ್ರೇರಿತ ಎಂದು ಕಾಂಗ್ರೆಸ್ ಮಾಡುತ್ತಿರುವ ಆರೋಪ ಖಂಡನೀಯವೆಂದು ಮಹೇಶ್ ಜೈನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.