ಮಡಿಕೇರಿ, ಅ. 7: ಕೊಡಗು ಜಿಲ್ಲೆಯಲ್ಲಿ ಜಾಗತಿಕ ಕೊರೊನಾ ಸೋಂಕು ಅಧಿಕವಾಗಿ ಹರಡುವದ ರೊಂದಿಗೆ; ನಗರ ಪ್ರದೇಶಗಳು ಮಾತ್ರವಲ್ಲದೆ ಗ್ರಾಮಾಂತರದಲ್ಲಿಯೂ ಆತಂಕಕ್ಕೆ ಕಾರಣವಾಗುತ್ತಿರುವದರಿಂದ, ಕರ್ನಾಟಕ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಮಾಸ್ಕ್ ಧರಿಸದವರಿಗೆ ದಂಡ ವಸೂಲಿ ಮಾಡಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಎಚ್ಚರಿಸಿದ್ದಾರೆ. ಸಾರ್ವಜನಿಕರು ಸಮಸ್ಯೆಯ ಗಂಭೀರತೆ ಅರಿತು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕೆಂದು ಅವರು ಕಿವಿಮಾತು ಹೇಳಿದ್ದಾರೆ.ಈ ಸಂಬಂಧ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಕಳೆದ 6 ತಿಂಗಳಿನಿಂದ ದೇಶದ ಪ್ರಧಾನಿ ಸೇರಿದಂತೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಂದ ನಿರಂತರ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದರೂ, ಸಾರ್ವಜನಿಕರು ತಮ್ಮ ಆರೋಗ್ಯದ ರಕ್ಷಣೆಗಾಗಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷ್ಯ
(ಮೊದಲ ಪುಟದಿಂದ) ಮಾಡುತ್ತಿರುವದು ಸರಿಯಲ್ಲ ಎಂದು ಎಸ್‍ಪಿ ನೆನಪಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಜಾಗತಿಕ ಕೊರೊನಾ ಕರ್ನಾಟಕ ಹಾಗೂ ದೇಶದೆಲ್ಲೆಡೆ ವೇಗವಾಗಿ ಹಬ್ಬುತ್ತಿರುವ ವೇಳೆಯಲ್ಲಿ ಕೊಡಗಿನಲ್ಲಿಯೂ ಕಠಿಣ ನಿರ್ಧಾರ ಅನಿವಾರ್ಯವಾಗಿದೆ ಎಂದು ಉಲ್ಲೇಖಿಸಿದ ಅವರು, ಮಾಸ್ಕ್ ಧರಿಸದಿದ್ದರೆ ದಂಡ ತೆರುವದು ಅನಿವಾರ್ಯವಾಗಲಿದೆ ಎಂದರು.
ಕೊಡಗು ಜಿಲ್ಲಾ ಕೇಂದ್ರ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಸರಕಾರದ ಆದೇಶದಂತೆ ತಲಾ ರೂ. 250 ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದಲ್ಲಿ ರೂ. 100 ಮೊತ್ತದ ದಂಡವನ್ನು ವಿಧಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
ವಸೂಲಿಗೆ ಒತ್ತು : ಈ ಸಂಬಂಧ ಜಿಲ್ಲೆಯ ಮೂರು ಪೊಲೀಸ್ ಉಪವಿಭಾಗಗಳ ಉಪ ಅಧೀಕ್ಷಕರಾದ ಬಿ.ಪಿ. ದಿನೇಶ್ ಕುಮಾರ್, ಶೈಲೇಂದ್ರ ಹಾಗೂ ಜಯಕುಮಾರ್ ಅವರುಗಳನ್ನು ಸಂಪರ್ಕಿಸಲಾಗಿ, ಆಯ ಪೊಲೀಸ್ ಠಾಣೆಗಳಿಗೆ ಈಗಷ್ಟೇ ಅಧಿಕೃತ ಆದೇಶ ಬಂದಿದ್ದು, ಸಾರ್ವಜನಿಕರು ನಿರ್ಲಕ್ಷ್ಯ ತಳೆಯದಂತೆ ಸೂಚಿಸಲಾಗಿದೆ. ಕಾನೂನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವದು ಎಂದು ನೆನಪಿಸಿದ್ದಾರೆ.
ಈಗಾಗಲೇ ಕಂದಾಯ, ಆರೋಗ್ಯ, ಪೊಲೀಸ್ ಇಲಾಖೆಯಿಂದ ಆಯಾ ಗ್ರಾಮ ಪಂಚಾಯಿತಿ ಹಂತದಲ್ಲಿ ಜಂಟಿಯಾಗಿ ಜನಜಾಗೃತಿಯೊಂದಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೊನಾ ನಡುವೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನತೆ ಮಾಸ್ಕ್ ಧರಿಸದೆ ತೊಂದರೆಗೆ ಸಿಲುಕದಂತೆಯೂ ತಿಳಿಹೇಳಿದ್ದಾರೆ.