ಎನ್ಕೌಂಟರ್ನಲ್ಲಿ ಮೂವರು ಉಗ್ರರು ಬಲಿ
ಶ್ರೀನಗರ, ಅ. 7: ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್ನಲ್ಲಿ ಮಂಗಳವಾರ ಭಯೋತ್ಪಾದಕರ ಶೋಧ ಕಾರ್ಯಾಚರಣೆ ವೇಳೆ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಬುಧವಾರ ಹತ್ಯೆ ಮಾಡಿವೆ ಎಂದು ಪೆÇಲೀಸ್ ವಕ್ತಾರರು ತಿಳಿಸಿದ್ದಾರೆ. ಏತನ್ಮಧ್ಯೆ, ವದಂತಿಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಅಂತರ್ಜಾಲ ಸೇವೆಯನ್ನು ಶೋಪಿಯಾನ್ ಜಿಲ್ಲೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೆÇಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್ಒಜಿ), ರಾಷ್ಟ್ರೀಯ ರೈಫಲ್ಸ್ (ಆರ್ಆರ್) ಮತ್ತು ಸಿಆರ್ಪಿಎಫ್ ಜಂಟಿ ಶೋಧ ಕಾರ್ಯಾಚರಣೆಯನ್ನು ಶೋಪಿಯಾನ್ನ ಸಜ್ಜಾದ್ ಮೊಹಲ್ಲಾ ಸುಗನ್ ಜೈನ್ಪೆÇೀರಾದಲ್ಲಿ ಮಂಗಳವಾರ ಸಂಜೆಯಿಂದ ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ. ಎಲ್ಲಾ ನಿರ್ಗಮನ ಸ್ಥಳಗಳನ್ನು ಮೊಹರು ಮಾಡಿದ ನಂತರ ಭದ್ರತಾ ಪಡೆಗಳು ನಿರ್ದಿಷ್ಟ ಪ್ರದೇಶದತ್ತ ಸಾಗುತ್ತಿರುವಾಗ, ಅಲ್ಲಿ ಅಡಗಿಕೊಂಡಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ವಿವೇಚನೆಯಿಲ್ಲದೆ ಗುಂಡು ಹಾರಿಸಿದರು. ಈ ವೇಳೆ ಭದ್ರತಾ ಪಡೆಗಳು ತಿರುಗೇಟು ನೀಡಿದವು.
ರೂ. 2000 ಕೋಟಿ ಮೌಲ್ಯದ ಸ್ವತ್ತು ಜಪ್ತಿ
ಚೆನ್ನೈ, ಅ. 7: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾಗೆ ಸೇರಿದ ರೂ. 2000 ಕೋಟಿ ಮೌಲ್ಯದ ಸ್ವತ್ತನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಜಪ್ತಿ ಮಾಡಿದ್ದಾರೆ. ಬೇನಾಮಿ ಆಸ್ತಿ ತಡೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಿರುಥಾವೂರ್ ಮತ್ತು ಕೊಡನಾಡುವಿನಲ್ಲಿರುವ ರೂ. 300 ಕೋಟಿ ಮೌಲ್ಯದ ಆಸ್ತಿಯೂ ಜಪ್ತಿ ಮಾಡಲಾಗಿದೆ. ಇಂದು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದ ಎಲ್ಲಾ ಆಸ್ತಿಗಳು ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಹೆಸರಿನಲ್ಲಿ ಇವೆ. ಐಟಿ ಇಲಾಖೆಯ ಬೇನಾಮಿ ನಿಷೇಧ ದಳ ಜಪ್ತಿ ಮಾಡಿದ ಆಸ್ತಿಗಳ ಮೇಲೆ ಮುಟ್ಟುಗೋಲು ನೋಟೀಸ್ ಹಾಕಿದೆ. ಒಟ್ಟಾರೆ ರೂ. 2000 ಕೋಟಿ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ, ನಾಲ್ಕು ವರ್ಷಗಳ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾದ ನಂತರ ವಾಸವಾಗಿರಬೇಕೆಂದುಕೊಂಡಿದ್ದ ಬಂಗಲೆಯನ್ನು ಕೂಡಾ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.
ರಾಜ್ಯಕ್ಕೆ 15 ನವೋದ್ಯಮ ಪ್ರಶಸ್ತಿ
ಬೆಂಗಳೂರು, ಅ. 7: ರಾಷ್ಟ್ರೀಯ ನವೋದ್ಯಮ ಪ್ರಶಸ್ತಿಗಳಿಗಾಗಿ ``ನವೋದ್ಯಮ ಭಾರತ'' ವತಿಯಿಂದ ಇತ್ತೀಚೆಗೆ ನಡೆಸಲಾಗಿದ್ದ ಸ್ಪರ್ಧೆಗೆ ಕರ್ನಾಟಕದಿಂದ ಅತ್ಯಧಿಕ ಅರ್ಜಿಗಳು ಸಲ್ಲಿಕೆಯಾಗುವ ಜೊತೆಗೆ ಇಲ್ಲಿನ ಹಲವಾರು ನವೋದ್ಯಮಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ. ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಪಾತ್ರವಾಗಿರುವ 36 ನವೋದ್ಯಮಗಳ ಪೈಕಿ ರಾಜ್ಯದ 14 ನವೋದ್ಯಮಗಳು ಹಾಗೂ 1 ವೇಗವರ್ಧಕ (ಆಕ್ಸಲರೇಟರ್) ಸೇರಿವೆ ಎಂದು ಡಿಸಿಎಂ ತಿಳಿಸಿದ್ದಾರೆ. ಈ ಸ್ಪರ್ಧೆಗೆ ದೇಶದಾದ್ಯಂತ ಇರುವ ನವೋದ್ಯಮಗಳಿಂದ ಸಲ್ಲಿಕೆಯಾಗಿದ್ದ 1641 ಅರ್ಜಿಗಳ ಪೈಕಿ 418 ಅರ್ಜಿಗಳು ಕರ್ನಾಟಕದಿಂದ ಸಲ್ಲಿಕೆಯಾಗಿದ್ದವು. ಇದು ಒಟ್ಟಾರೆ ಸಲ್ಲಿಕೆಯಾದ ಅರ್ಜಿಗಳ ಪೈಕಿ ಶೇ.26 ರಷ್ಟಿರುವುದು ಗಮನಾರ್ಹ ಅಂಶ ಎಂದು ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ.
ಡಿ.ಕೆ. ರವಿ ಪತ್ನಿ ಕುಸುಮಾ ಕಾಂಗ್ರೆಸ್ ಅಭ್ಯರ್ಥಿ
ಬೆಂಗಳೂರು, ಅ. 7: ರಾಜ್ಯದ ಎರಡು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಬುಧವಾರ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಆರ್.ಆರ್. ನಗರಕ್ಕೆ ಡಿ.ಕೆ. ರವಿ ಪತ್ನಿ ಹೆಚ್. ಕುಸುಮಾ ಮತ್ತು ಶಿರಾ ಕ್ಷೇತ್ರಕ್ಕೆ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರ ಹೆಸರನ್ನು ಆಯ್ಕೆ ಮಾಡಿ ಎಐಸಿಸಿ ಪ್ರಕಟಿಸಿದೆ. ಎಐಸಿಸಿ ಚುನಾವಣಾ ಸಮಿತಿ ಕುಸುಮಾ ಅವರ ಹೆಸರನ್ನು ಅಧಿಕೃತವಾಗಿ ಆಯ್ಕೆ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ಕುಸುಮಾ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಮುನಿರತ್ನ ಅವರ ರಾಜೀನಾಮೆ ಬಳಿಕ ತೆರವಾಗಿದ್ದ ಕ್ಷೇತ್ರಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಅವರ ಹೆಸರನ್ನು ಘೋಷಿಸಲಾಗಿದೆ. ನವೆಂಬರ್ 3 ರಂದು ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ಎಸ್ಬಿಐ ಅಧ್ಯಕ್ಷರಾಗಿ ದಿನೇಶ್ಕುಮಾರ್ ಆಯ್ಕೆ
ನವದೆಹಲಿ, ಅ. 7: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಅಧ್ಯಕ್ಷರನ್ನಾಗಿ ಹಿರಿಯ ಬ್ಯಾಂಕರ್ ದಿನೇಶ್ಕುಮಾರ್ ಖರಾ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ರಜನೀಶ್ಕುಮಾರ್ ತಮ್ಮ ಮೂರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಹಿನ್ನೆಲೆ ನೂತನ ಅಧ್ಯಕ್ಷರ ನೇಮಕ ಮಾಡಲಾಯಿತು. ಕೇಂದ್ರ ಸರ್ಕಾರವು ಮೂರು ವರ್ಷಗಳ ಅವದಿಗೆ ದಿನೇಶ್ ಕುಮಾರ್ ಅವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಅವಧಿಯು 2020ರ ಅಕ್ಟೋಬರ್ 7 ರಿಂದ ಅಥವಾ ಹುದ್ದೆಯ ಉಸ್ತುವಾರಿ ವಹಿಸಿಕೊಂಡ ದಿನಾಂಕದಿಂದ ಮುಂದಿನ ಆದೇಶದವರೆಗೆ ಇರುತ್ತದೆ. ಹಣಕಾಸು ಸಚಿವಾಲಯವು ಈ ಅಧಿಸೂಚನೆಯನ್ನು ಹೊರಡಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರನ್ನಾಗಿ ದಿನೇಶ್ಕುಮಾರ್ ಅವರನ್ನು ನೇಮಿಸುವಂತೆ ಬ್ಯಾಂಕ್ಸ್ ಬೋರ್ಡ್ ಬ್ಯೂರೋ (ಬಿಬಿಬಿ) ಕಳೆದ ತಿಂಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ದಿನೇಶ್ಕುಮಾರ್ ಅವರು 2017ರಲ್ಲಿ ಎಸ್ಬಿಐ ಅಧ್ಯಕ್ಷರ ಹುದ್ದೆಗೆ ಸ್ಪರ್ಧಿಸಿದ್ದರು.
ಮೂವರು ಪೊಲೀಸರ ಅಮಾನತು
ದಾವಣಗೆರೆ, ಅ. 7: ಠಾಣೆಯಲ್ಲಿ ಆರೋಪಿಯ ಶಂಕಾಸ್ಪದ ಸಾವಿನ ಹಿನ್ನೆಲೆ ಮಾಯಕೊಂಡ ಪೆÇಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಮೂವರು ಪೆÇಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಪಿಎಸ್ಐ ಪ್ರಕಾಶ್, ಹೆಡ್ ಕಾನ್ಸ್ಟೇಬಲ್ ನಾಗರಾಜ್ ಮತ್ತು ಪೆÇಲೀಸ್ ಕಾನ್ಸ್ಟೇಬಲ್ ಶೇರ್ ಆಲಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಎಸ್ಪಿ ಹನುಮಂತರಾಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಠಲಾಪುರ ಗ್ರಾಮದ ಆರೋಪಿ ಮರುಳಸಿದ್ದಪ್ಪ ಅವರ ಪತ್ನಿ ವೃಂದಮ್ಮ ಫೆÇೀನ್ ಕರೆ ಮಾಡಿ ತನ್ನ ಪತಿ ಮತ್ತೊಬ್ಬಳನ್ನು ವಿವಾಹವಾಗಿದ್ದು ಪತಿ ಕಾಣೆಯಾಗಿದ್ದಾರೆ, ಪತ್ತೆಹಚ್ಚಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಪೆÇಲೀಸರು ಕಾರ್ಯಪ್ರವೃತ್ತರಾಗಿ ಹುಡುಕಿದಾಗ ಹುಚ್ಚವನಹಳ್ಳಿ ಗ್ರಾಮದಲ್ಲಿ ಆತ ಪತ್ತೆಯಾಗಿದ್ದ. ಅಂದೇ ಪೆÇಲೀಸ್ ಠಾಣೆಗೆ ಆತನನ್ನು ಕರೆ ತರಲಾಗಿತ್ತು.
ಲಂಡನ್ನಲ್ಲಿ 3 ಭಾರತೀಯರ ಸಾವು
ಲಂಡನ್, ಅ. 7: ಲಂಡನ್ನಲ್ಲಿ ತಮಿಳು ಮೂಲದ ಕುಟುಂಬದ ಮೂವರು ಸದಸ್ಯರು ಅವರ ಫ್ಲಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದು, ಸ್ಕಾಟ್ಲ್ಯಾಂಡ್ ಯಾರ್ಡ್ ತನಿಖೆ ಪ್ರಾರಂಭಿಸಿದೆ. ಬ್ರೆಂಟ್ ಫೆÇೀರ್ಡ್ನ ಫ್ಲಾಟ್ನಲ್ಲಿದ್ದ ಪೂರ್ಣ ಕಾಮೇಶ್ವರಿ ಶಿವರಾಜ್ ಅವರ ಕ್ಷೇಮದ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ, ಪೆÇಲೀಸರಿಗೆ ಮಾಹಿತಿ ತಿಳಿದು ಪ್ಲಾಟ್ಗೆ ತೆರಳಿ ಬೀಗ ಒಡೆದು ನೋಡಿದಾಗ 36 ವರ್ಷದ ಮಹಿಳೆ ಆಕೆಯ 3 ವರ್ಷದ ಮಗ ಕೈಲಾಶ್ ಕುಹಾರಾಜ್ ಅವರ ಶವ ಪತ್ತೆಯಾಗಿದೆ. ಪೂರ್ಣ ಕಾಮೇಶ್ವರಿ ಅವರ ಪತಿ ಕುಹಾರಾಜ್ ಚಿದಂಬರನಾಥನ್ ಸಹ ತೀವ್ರ ಮಾರಣಾಂತಿಕ ಗಾಯಗಳಿಂದ ಬಿದ್ದಿದ್ದು ಕಂಡುಬಂದಿದೆ. 42 ವರ್ಷದ ವ್ಯಕ್ತಿ ಪೆÇಲೀಸರು ಪ್ಲಾಟ್ಗೆ ಪ್ರವೇಶಿಸುತ್ತಿದ್ದಂತೆಯೇ ತನಗೆ ತಾನೇ ಘಾಸಿಗೊಳಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಗುರುವಾರದಂದು ಮರಣೋತ್ತರ ಪರೀಕ್ಷೆ ನಡೆಯಲಿದ್ದು ಅದರ ಬಳಿಕವಷ್ಟೇ ತಮ್ಮ ತನಿಖಾ ಸಾರಾಂಶವನ್ನು ಹೇಳಬಹುದು ಎಂದು ಪೆÇಲೀಸರು ತಿಳಿಸಿದ್ದಾರೆ.