ಸಿದ್ದಾಪುರ, ಅ. 7: ಕಾಫಿ ತೋಟದ ಒಳಗಿದ್ದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಸೆರೆ ಹಿಡಿಯುವಲ್ಲಿ ಉರಗ ಪ್ರೇಮಿ ಶಾಜಿ ಹಾಗೂ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕುಶಾಲನಗರ ವಲಯದ ಮೀನುಕೊಲ್ಲಿ ಶಾಖಾ ವ್ಯಾಪ್ತಿಯ ವಾಲ್ನೂರು ತ್ಯಾಗತ್ತೂರು ಗ್ರಾಮದ ನಿವಾಸಿ ಡಾ. ಮಹೇಶ್ ಅವರ ಕಾಫಿ ತೋಟದಲ್ಲಿದ ಅಂದಾಜು 8 ಅಡಿ, 10 ಕೆ.ಜಿ. ತೂಕದ ಹೆಬ್ಬಾವು ಕಂಡು ಬಂದಿತು.

ಈ ಬಗ್ಗೆ ಅರಣ್ಯ ಇಲಾಖಾ ಅಧಿಕಾರಿಗಳಿಗೆ ತೋಟದ ಮಾಲೀಕರು ದೂರು ನೀಡಿದ ಮೇರೆಗೆ ಸ್ಥಳಕ್ಕೆ ಉಪ ವಲಯಾರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಭೇಟಿ ನೀಡಿ ಪರಿಶೀಲಿಸಿದರು. ಕೂಡಲೇ 7ನೇ ಹೊಸಕೋಟೆ ನಿವಾಸಿ ಉರಗ ಪ್ರೇಮಿ ಶಾಜಿ ಅವರನ್ನು ಕರೆಸಿ ಅರಣ್ಯ ಸಿಬ್ಬಂದಿಗಳು ಸೇರಿ ಹೆಬ್ಬಾವನ್ನು ಸೆರೆ ಹಿಡಿದು ರಕ್ಷಣೆ ಮಾಡಿದರು. ಸೆರೆ ಹಿಡಿದ ಹೆಬ್ಬಾವನ್ನು ಆನೆಕಾಡು ಮೀಸಲು ಅರಣ್ಯಕ್ಕೆ ಬಿಡಲಾಯಿತು. ಅರಣ್ಯ ರಕ್ಷಕ ಚರಣ್ ಕುಮಾರ್, ಸಿಬ್ಬಂದಿಗಳಾದ ಅಪ್ಪಸ್ವಾಮಿ, ಜಗದೀಶ್, ವಾಸುದೇವ ಹಾಗೂ ಗ್ರಾಮಸ್ಥರು ಇದ್ದರು. - ವಾಸು ಎ.ಎನ್.