ವೀರಾಜಪೇಟೆ, ಅ.6 : ವೀರಾಜಪೇಟೆ ಬಳಿಯ ಪೆರುಂಬಾಡಿ ಎಂಬಲ್ಲಿ ವಿಷದ ಅಣಬೆ ಸೇವಿಸಿ 71 ವರ್ಷದ ವೃದ್ಧೆ ಸಾವನ್ನಪ್ಪಿದರೆ ತಾಯಿ, ಮಗಳು ಚಿಂತಾಜನಕ ಸ್ಥಿತಿಯಲ್ಲಿ ಮಡಿಕೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಪೆರುಂಬಾಡಿ ಗ್ರಾಮದ ಹರೀಶ್ ಎಂಬವರ ಪತ್ನಿ ಸುಮಿತಾ ಎಂಬಾಕೆಗೆ ಆಕೆಯ ಸಹೋದರ ಕೃಷ್ಣ ಎಂಬಾತ ತಾ. 4ರಂದು ಅಪರಾಹ್ನ ಸಿದ್ದಾಪುರದ ಬಸ್ಸು ನಿಲ್ದಾಣದಲ್ಲಿ ಮಾರಾಟ ಮಾಡುತ್ತಿದ್ದ ಅಣಬೆಯನ್ನು ಖರೀದಿಸಿ ಸಾರು ಮಾಡಲು ತಂದು ಕೊಟ್ಟಿದ್ದನು. ಅಣಬೆಯನ್ನು ಅಂದು ರಾತ್ರಿಯೇ ಸುಮಿತಾ ಸಾರು ಮಾಡಿ ಅತ್ತೆ ಮಾದವಿ ಹಾಗೂ ನಾಲ್ಕೂವರೆ ವರ್ಷದ ಕರಿದಾ ಎಂಬ ಹೆಣ್ಣು ಮಗುವಿಗೂ ಊಟ ಬಡಿಸಿ ತಾನೂ ಊಟ ಮಾಡಿ ಮಲಗಿದ್ದವರಿಗೆ ಮಾರನೇ ದಿನ ಬೆಳಗ್ಗಿನಿಂದಲೇ ಮೂವರಿಗೂ ವಾಂತಿ, ಬೇಧಿಯಿಂದ ನರಳುತ್ತಿದ್ದುದರಿಂದ ಮೂವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿತ್ತು.ಆಸ್ಪತ್ರೆಗೆ ಸೇರಿದ ಮೂವರ ಪೈಕಿ ದಿ. ರಾಮನ್ ಅವರ ಪತ್ನಿ ವೃದ್ಧೆ ಮಾದವಿ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಸುಮಿತಾ ಹಾಗೂ ಕರಿದಾಳನ್ನು ಮಡಿಕೇರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.ಮೃತ ಮಾದವಿಯ ಹಿರಿಯ ಮಗ ಅರಸು ನಗರದ ಚಂದ್ರನ್ ನಗರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಆಕಸ್ಮಿಕ ಸಾವಿನ ಕುರಿತು ಪ್ರಕರಣ ದಾಖಲಿಸಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.