*ಗೋಣಿಕೋಪ್ಪ, ಅ. 6: ಮೈಸೂರಮ್ಮ ನಗರದ ನಿವಾಸಿಗಳಿಗೆ ಕಸ ವಿಲೇವಾರಿ ಸಮಸ್ಯೆ ಶಾಪವಾಗಿದೆ. ಕಸ ವಿಲೇವಾರಿಯ ಬಗ್ಗೆ ಕ್ರಮಕೈಗೊಳ್ಳಲು ಪಂಚಾಯಿತಿ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರುವತ್ತೊಕ್ಲು ಗಾ.್ರಪಂ. ವ್ಯಾಪ್ತಿಯ ಮೈಸೂರಮ್ಮ ನಗರದಲ್ಲಿ ಹಲವು ವರ್ಷಗಳಿಂದ ಕಸ ವಿಲೇವಾರಿ ಸಮಸ್ಯೆ ಕಾಡುತ್ತಿದೆ ಮುಖ್ಯ ರಸ್ತೆಯ ಬದಿಗಳಲ್ಲಿ ಕಸದರಾಶಿಯಿಂದ ಅಸಹ್ಯ ವಾತಾವರಣ ಸೃಷ್ಟಿಯಾಗಿದೆ. ಆದರೂ ಈ ಬಗ್ಗೆ ಚುನಾಯಿತ ಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವತ್ತ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿನ ಕಲುಷಿತ ವಾತಾವರಣಕ್ಕೆ ಕಾರಣವಾದ ಕಸದ ರಾಶಿಯನ್ನು ಕಂಡು ಅಸಮಾಧಾನ ಗೊಂಡು ಇಲ್ಲಿನ ನಿವಾಸಿಗಳು ಒಟ್ಟುಗೂಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರನ್ನು ಕಸ ವಿಲೇವಾರಿ ಮಾಡಿರುವ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ನಂತರ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿ ಮನವರಿಕೆ ಮಾಡಿಕೊಟ್ಟರು. ತಕ್ಷಣವೇ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳದಿದ್ದರೆ ಕಸವನ್ನು ಗ್ರಾಮಸ್ಥರೇ ಟ್ರ್ಯಾಕ್ಟರಿಗೆ ತುಂಬಿ ಪಂಚಾಯಿತಿ ಎದುರು ಸುರಿಯುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀನಾರಾಯಣ ಅವರು ತಕ್ಷಣವೇ ಕಸವಿಲೇವಾರಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೆ ಸ್ಪಂದಿಸಿದ ಗ್ರಾಮಸ್ಥರು ತಕ್ಷಣ ಕ್ರಮ ಕೈಗೊಳ್ಳುವುದರ ಜೊತೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಪಟ್ಟು ಹಿಡಿದರು.
ರಸ್ತೆಯ ಬದಿಯಲ್ಲಿ ಕಸ ಸುರಿದು ಹೋಗುವವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಪಂಚಾಯಿತಿ ಮುಂದಾಗಬೇಕು ಎಂಬ ಷರತ್ತುಗಳನ್ನು ನೀಡುವ ಮೂಲಕ ಪಂಚಾಯ್ತಿ ಅಭಿವೃದ್ಧಿ ಅವರ ಭರವಸೆಗೆ ಗ್ರಾಮಸ್ಥರು ಮಣಿದರು. ಈ ಸಂದರ್ಭ ಗ್ರಾಮಸ್ಥರಾದ ಸಾಜಿ, ಕವಿತಾ, ಆಶೋಕ್, ವಿನಯ್, ಶರತ್, ಲಾಲು, ಹರ್ಷ, ರವಿ, ಅಧ್ಯಕ್ಷ ಸಂತೋಷ್ ಸೇರಿದಂತೆ ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು. -ದಿನೇಶ್ ಎನ್.ಎನ್.