ಮಡಿಕೇರಿ, ಅ. 6: ಜಿಲ್ಲೆಯಲ್ಲಿರುವ ಎರಡು ಪ್ರಬಲ ಜನಾಂಗಗಳು ಒಗ್ಗಟ್ಟು ಮತ್ತು ಅನ್ಯೋನ್ಯತೆಯಿಂದ ತಲಕಾವೇರಿಯ ಸಂಪ್ರದಾಯವನ್ನು ಪಾಲಿಸಿಕೊಂಡು ಬರಬೇಕಾಗಿದೆ; ಅಶಾಂತಿಯನ್ನು ಮೂಡಿಸುವ ರೀತಿ ನಡೆದುಕೊಂಡರೆ ಕಾವೇರಿಯ ಶಾಪ ತಟ್ಟಬಹುದೆಂದು ಭಾಗಮಂಡಲ ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಿ. ಪಳಂಗಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಗಮಂಡಲದಲ್ಲಿ ಭಕ್ತಾದಿಗಳಿಗೆ ಅತಿಥಿ ಗೃಹಗಳ ಮೂಲಕ ಆಶ್ರಯ ನೀಡಲಾಗುತ್ತಿ ದೆಯೇ ಹೊರತು ಯಾವುದೇ ಮೋಜು ಮಸ್ತಿ ನಡೆಯುತ್ತಿಲ್ಲ. ಆದ್ದರಿಂದ ವಸತಿ ಗೃಹ ಅಥವಾ ಹೋಂ ಸ್ಟೇಗಳು ಭಾಗಮಂಡಲದಲ್ಲಿ ನಡೆಯಬಾರದೆಂದು ಹೇಳುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟರು.
ನಿರ್ದೇಶಕ ಕುದುಕುಳಿ ಭರತ್ ಅವರು ಮಾತನಾಡಿ, ಸೆ. 27ರ ಸಭೆಯಲ್ಲಿ ಕಾವೇರಿ ತುಲಾಸಂಕ್ರಮಣ ಜಾತ್ರೆಯನ್ನು ಪ್ರತಿ ವರ್ಷದಂತೆ ಸಂಪ್ರದಾಯ ಬದ್ಧವಾಗಿ ನಡೆಸಬೇಕೆಂದು ಚರ್ಚಿಸಲಾಗಿದೆ. ಪತ್ತಾಯಕ್ಕೆ ಅಕ್ಕಿ ಹಾಕುವ ದಿನದಿಂದ ಪ್ರಾರಂಭವಾಗಿ ಭಾಗಮಂಡಲದಲ್ಲಿ ಕ್ಷೇತ್ರಪಾಲ ಗುಳಿಗ ಮತ್ತು ವಿಷ್ಣುಮೂರ್ತಿ ತೆರೆ ಮುಗಿಯುವವರೆಗೆ ತಮ್ಮ ಕಾರ್ಯಗಳನ್ನು ವ್ಯವಸ್ಥಿತವಾಗಿ ನಡೆಸಬೇಕೆಂದು ಭಾಗಮಂಡಲ ತಕ್ಕರಿಗೆ ಸಲಹೆ ನೀಡಲಾಗಿದೆ ಎಂದರು.
ತಲಕಾವೇರಿಯ ತಕ್ಕರು ಭಾಗಮಂಡಲದಿಂದ ಆಭರಣಗಳನ್ನು ಅ.15 ರಂದು ತೆಗೆದುಕೊಂಡು ಹೋದ ನಂತರ ಕಿರು ಸಂಕ್ರಮಣದವರೆಗೆ ಎಲ್ಲಾ ದೈವಿಕ ಸಂಪ್ರದಾಯಗಳನ್ನು ಕ್ರಮಬದ್ಧವಾಗಿ ನಡೆಸಬೇಕೆಂದು ಮನವಿ ಮಾಡಲಾಗಿದೆಯೇ ಹೊರತು ಅಂದಿನ ಸಭೆಯಲ್ಲಿ ಯಾವುದೇ ಸಾಂಪ್ರದಾಯಿಕ ಉಡುಪಿನ ಬಗ್ಗೆ ಚರ್ಚೆ ನಡೆದಿಲ್ಲವೆಂದು ಭರತ್ ತಾ. 28ರ ಮಾಧ್ಯಮ ಸುದ್ದಿಗಳಿಗೆ ಇಂದು ಸ್ಪಷ್ಟನೆ ನೀಡಿದರು.
ತಕ್ಕರ ದಟ್ಟಿ ಕುಪ್ಪಸ ವ್ಯವಸ್ಥಿತವಾಗಿರಬೇಕೆಂದು ಹಿರಿಯರು ಸಲಹೆ ನೀಡಿದ್ದಾರೆ, ಬೇರೆ ಯಾರೂ ದಟ್ಟಿ ಕುಪ್ಪಸ ಧರಿಸಬಾರದೆಂಬ ಚರ್ಚೆಗಳು ನಡೆದಿಲ್ಲ. ಕೊಡಗಿನ 18 ಮೂಲ ನಿವಾಸಿಗಳಿಂದ ಹಾಲೇರಿ ವಂಶದ ರಾಜರು ದೇವಾಲಯ, ಅರಮನೆ ಹಾಗೂ ಹಬ್ಬ ಹರಿದಿನಗಳಲ್ಲಿ ಕುಪ್ಪಚಾಲೆ, ದಟ್ಟಿ ಕುಪ್ಪಸ ಧರಿಸಿ ಸಂಭ್ರಮಿಸಲು ಅವಕಾಶ ಮಾಡಿಕೊಟ್ಟಿದ್ದರು. ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಎಂದರು.
ಪತ್ತಾಯಕ್ಕೆ ಅಕ್ಕಿ ಹಾಕುವ ಸಂದರ್ಭದಲ್ಲಿ ನಡೆದ ಗೊಂದಲಗಳು ಮುಂದಿನ ದಿನಗಳಲ್ಲಿ ಆಗದಂತೆ ತಕ್ಕರು ಎಚ್ಚರಿಕೆ ವಹಿಸಬೇಕೆಂದು ಸಭೆಯಲ್ಲಿ ಹಿರಿಯರು ಸಲಹೆ ನೀಡಿರುವುದಾಗಿ ಅವರು ಹೇಳಿದರು. ಸುದ್ದಿಗೋಷ್ಠಿ ಯಲ್ಲಿ ಗೌಡ ಸಮಾಜದ ಕಾರ್ಯ ದರ್ಶಿ ನಿಡ್ಯಮಲೆ ರವಿ ಹಾಗೂ ನಿರ್ದೇಶಕ ಕುಯ್ಯಮುಡಿ ಮನೋಜ್ ಕುಮಾರ್ ಉಪಸ್ಥಿತರಿದ್ದರು.