ಮಡಿಕೇರಿ, ಅ. 6: ಕೊಡಗು ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣಗಳೂ ಕೂಡ ಏರಿಕೆಯಾಗುತ್ತಿದ್ದು, ಈ ಪ್ರಮಾಣವನ್ನು ಇಳಿಮುಖಗೊಳಿ ಸುವತ್ತ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸೂಚನೆ ನೀಡಿದರು.ಇಂದು ಜಿಲ್ಲಾ ಪಂಚಾಯತ್ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೂರು ಮಂದಿಯನ್ನು ಪರೀಕ್ಷೆಗೊಳಪಡಿಸಿದರೆ ಅದರಲ್ಲಿ ಹದಿನಾರು ಮಂದಿಗೆ ಸೋಂಕು ಪತ್ತೆಯಾಗುತ್ತಿದೆ. ಸಾವನ್ನಪ್ಪುತ್ತಿರುವವರ ಪ್ರಮಾಣ ಕೂಡ ಶೇ. 1.5 ರಷ್ಟಿದ್ದು, ಇದನ್ನು ಶೇ. 1ಕ್ಕಿಂತ ಕಡಿಮೆ ಮಾಡಲು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಕೊರೊನಾ ಸೋಂಕು ಪತ್ತೆಯಾದ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕವನ್ನು 48 ಗಂಟೆಯೊಳಗೆ ಪತ್ತೆ ಹಚ್ಚುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಬೇಕು. ಈ ಕಾರ್ಯದಲ್ಲಿ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.
ಸಂತೆ, ಮಾರುಕಟ್ಟೆ, ಬಸ್ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷಾ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಹಾಗೂ ಸಂತೆಗಳಲ್ಲಿ ಮಾರಾಟಗಾರರು ಹಾಗೂ ವರ್ತಕರುಗಳನ್ನು ಆಗಿಂದಾಗ್ಗೆ ಪರೀಕ್ಷೆಗೊಳಪಡಿಸಲು ಕ್ರಮಕೈಗೊಳ್ಳು ವಂತೆಯೂ ನಿರ್ದೇಶನ ನೀಡಿದ್ದೇನೆ. ಮಾರುಕಟ್ಟೆ ಒಳಭಾಗದಲ್ಲಿನ ಸಂತೆಯನ್ನು ಹೊರಾಂಗಣ ಪ್ರದೇಶದಲ್ಲಿ ನಡೆಸಲು ಮುಂದಾಗುವಂತೆ ಸಂಬಂಧಿಸಿದವರಿಗೆ ಸೂಚಿಸಿದ್ದೇನೆ. ಇದರಿಂದ ಭೌತಿಕ ಅಂತರ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳಿಗೆ ಬೇಕಾಗಿರುವ ಅಗತ್ಯ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಳ್ಳಲಿದ್ದೇನೆ. ಜಿಲ್ಲೆಯ ಮೂರು ತಾಲೂಕಿನ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಕೊರತೆಯನ್ನು ಅತೀ ಶೀಘ್ರವಾಗಿ ನೀಗಿಸುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ.
ಜಿಲ್ಲೆಯಲ್ಲಿ ಒಳ್ಳೆಯ ಖಾಸಗಿ ಆಸ್ಪತ್ರೆಗಳು ಇಲ್ಲ. ಆದ್ದರಿಂದ ಇಲ್ಲಿನವರು ಹೆಚ್ಚಿನ ಚಿಕಿತ್ಸೆಗೆ ಮೈಸೂರು, ಮಂಗಳೂರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ವೈದ್ಯಕೀಯ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಕ್ರಮಕೈಗೊಳ್ಳುವುದಾಗಿ ಅವರು ಭರವಸೆಯಿತ್ತರು.
ಹೋಂ ಐಸೋಲೇಷನ್ಗೆ ಒಳಪಟ್ಟ ರೋಗಿಗಳನ್ನು ಆಗಿಂದಾಗ್ಗೆ ಮನೆಗಳಿಗೆ ತೆರಳಿ ಯೋಗಕ್ಷೇಮ ವಿಚಾರಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡಬೇಕು. (ಮೊದಲ ಪುಟದಿಂದ) ಇಲ್ಲವಾದರೆ ರೋಗ ಉಲ್ಬಣಗೊಂಡು ಕೊನೆ ಘಳಿಗೆಯಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗಿ ಜೀವಹಾನಿ ಸಂಭವಿಸುವ ಘಟನೆಗಳು ನಡೆಯುತ್ತವೆ. ಆದ್ದರಿಂದ ಆರಂಭದಿಂದಲೇ ಅವರುಗಳ ಬಗ್ಗೆ ನಿಗಾವಹಿಸುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಡಾ. ಸುಧಾಕರ್ ಹೇಳಿದರು.
ಕೊರೊನಾ ಸೋಂಕಿತರು ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕು. ಇಲ್ಲವಾದರೆ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ. ಮಾಸ್ಕ್ ಅನ್ನು ಧರಿಸುವುದು ಕಡ್ಡಾಯ. ಇಲ್ಲವಾದರೆ 500 ರೂ. ದಂಡ ವಿಧಿಸುವ ನಿಯಮ ಜಾರಿಯಾಗಿದ್ದು, ಇದನ್ನು ಯಾರೂ ನಿರ್ಲಕ್ಷಿಸುವಂತಿಲ್ಲ ಎಂದ ಅವರು ಸದ್ಯದ ಮಟ್ಟಿಗೆ ಕೊರೊನಾಗೆ ಮಾಸ್ಕ್ವೊಂದೇ ಔಷಧಿ ಎಂದು ಅಭಿಪ್ರಾಯಪಟ್ಟರು.
ಊಹಾಪೋಹಗಳಿಗೆ ಕಿವಿಗೊಡಬೇಡಿ
ಒಬ್ಬ ಕೊರೊನಾ ರೋಗಿ ಆಸ್ಪತ್ರೆಗೆ ದಾಖಲಾದರೆ ಸರಕಾರದಿಂದ ವೈದ್ಯರಿಗೆ ಲಕ್ಷಾಂತರ ಹಣ ಬರುತ್ತದೆ. ರೋಗಿಯನ್ನು ಬಳಸಿಕೊಂಡು ಹಣ ಮಾಡಲಾಗುತ್ತಿದೆ ಎಂಬಿತ್ಯಾದಿ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಈ ಬಗ್ಗೆ ಯಾವುದೇ ಆತಂಕ ಬೇಡ.
ಊಹಾಪೋಹಗಳನ್ನು ನಂಬಿ, ರೋಗ ಬಂದರೂ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳದೆ ಪ್ರಾಣಹಾನಿ ಮಾಡಿಕೊಳ್ಳಬೇಡಿ ಎಂದು ಜನತೆಗೆ ಸುಧಾಕರ್ ಮನವಿ ಮಾಡಿದರು.
ಈ ಸಂದರ್ಭ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ. ಸಿಇಓ ಭಂವರ್ ಸಿಂಗ್ ಮೀನಾ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಇದ್ದರು.