ಗೊಂಚಲಲ್ಲಿ ಕೊಳೆರೋಗ - ಮರಗೋಡು ಬೆಳೆಗಾರರ ಸಂಕಷ್ಟ ಮಡಿಕೇರಿ, ಅ. 6: ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕಾಫಿ ಹಾಗೂ ಕರಿಮೆಣಸು ಬೆಳೆಯುವ ಪ್ರದೇಶವೆಂದೇ ಪರಿಗಣಿತವಾಗಿದ್ದ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.ಒಂದೆಡೆ ರೊಬಸ್ಟಾ ಕಾಫಿ ಗೊಂಚಲಲ್ಲೇ ಕೊಳೆರೋಗದಿಂದಾಗಿ ಉದುರತೊಡಗಿದ್ದರೆ, ಮತ್ತೊಂದೆಡೆ ರೊಬಸ್ಟಾ ಸೇರಿದಂತೆ ಅರೆಬಿಕಾ ಕಾಫಿ ಹಣ್ಣಾಗುತ್ತಿದ್ದು, ಕುಯಿಲು ಮಾಡಿದ ಕಾಫಿಯನ್ನು ಒಣಗಿಸಲು ಪರದಾಡುವಂತಾಗಿದೆ. ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಹಣ್ಣಾದ ಕಾಫಿಯನ್ನು ಮನೆಯ ಅಟ್ಟ, ವಾಹನ ಶೆಡ್‍ನಲ್ಲಿ.., ಅಷ್ಟೇ ಅಲ್ಲದೆ ಏಲಕ್ಕಿ ಒಣಗಿಸುವ ಗೂಡಿನಲ್ಲಿ ಒಣಗಿಸುವ ದೃಶ್ಯ ಕಂಡುಬರುತ್ತಿದೆ. ಕರಿಚಿನ್ನ ಕರಿಮೆಣಸು ಕಾಣೆಯಾಗುತ್ತಿದ್ದು, ಏಲಕ್ಕಿ, ಅಡಿಕೆ ಬೆಳೆ ಬೆಳೆಗಾರರಿಗೆ ಕೊಂಚ ಸಮಾಧಾನ ತಂದಿದೆ.(ಮೊದಲ ಪುಟದಿಂದ) ಮರಗೋಡು, ಕಟ್ಟೆಮಾಡು, ಅರೆಕಾಡು, ಹೊಸ್ಕೇರಿ ಎಂದರೆ ಅಲ್ಲಿ ಹೆಚ್ಚು ಕಾಫಿ, ಕರಿಮೆಣಸು ಬೆಳೆಯುವ ಪ್ರದೇಶವೆಂದೇ ಗುರುತಿಸಲಾಗಿತ್ತು. ಅಲ್ಲದೆ ವರ್ಷಂಪ್ರತಿ ಉತ್ತಮ ಮಳೆಯೊಂದಿಗೆ ಅತಿ ಬೇಗನೆ ಫಸಲು ಕೊಡುವ ಪ್ರದೇಶವೂ ಇದಾಗಿದೆ. ಆದರೆ ಕಳೆದ ಮೂರು ವರ್ಷಗಳ ಅತಿವೃಷ್ಟಿಯ ಕರಿನೆರಳು ಈ ಪ್ರದೇಶಕ್ಕೂ ತಟ್ಟಿದೆ. ಬಹುಬೇಗ ಕಾಫಿ, ಕರಿಮೆಣಸು ಕಾಯಿ ಕಟ್ಟಿಕೊಳ್ಳುವ ಈ ಪ್ರದೇಶದಲ್ಲೀಗ ಕಾಫಿ ಹಣ್ಣಾಗತೊಡಗಿವೆ.

ಅರೆಬಿಕಾ ಬೆಳೆದಿರುವ ಪ್ರದೇಶಗಳಲ್ಲಂತೂ ಬಹುತೇಕ ಹಣ್ಣಾಗಿವೆ. ಇನ್ನು ರೊಬಸ್ಟಾ ಹೊಸ ತಳಿ ‘ಡಾರ್ಫ್’ ಕೂಡ ಹಣ್ಣಾಗತೊಡಗಿವೆ. ಆದರೆ ಅಕಾಲಿಕ ಮಳೆಯಿಂದಾಗಿ ಭೂಮಿಯ ತೇವಾಂಶ ಇನ್ನೂ ಆರದಿರುವುದರಿಂದ ಕುಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಹರಸಾಹಸ ಪಡುವಂತಾಗಿದೆ.

ಕಾರು, ಜೀಪು ನಿಲ್ಲಿಸುವ ಶೆಡ್‍ಗಳು, ಮನೆಯ ಮೇಲಿನ ಅಟ್ಟ, ಏಲಕ್ಕಿ ಒಣಗಿಸುವ ಗೂಡುಗಳಲ್ಲಿ ಒಣಗಲು ಹಾಕುವಂತಾಗಿದೆ. ಏಳು-ಎಂಟು ಬಿಸಿಲಿಗೆ ಒಣಗಲಿರುವ ಕಾಫಿಯನ್ನು ಇದೀಗ ಹತ್ತು-ಹದಿನೈದು ದಿನಗಳಿಗೂ ಅಧಿಕ ದಿವಸ ಒಣಗಿಸುವ ಪರಿಸ್ಥಿತಿ ತಲೆದೋರಿದೆ. ಕಾಫಿ ಒಣಗುವಿಕೆಯ ಮೇಲೆ ವ್ಯಾಪಾರಿಗಳ ‘ಔಟ್ ಟರ್ನ್’ ಕೂಡ ನಿರ್ಧರಿತವಾಗಲಿದ್ದು, ಅದರ ಮೇಲೆ ಬೆಲೆ ನಿಗದಿಯಾಗುತ್ತದೆ. ಇಲ್ಲಿ ‘ಔಟ್ ಟರ್ನ್’ ಸಮಸ್ಯೆ ಕೂಡ ಬೆಳೆಗಾರರನ್ನು ಕಾಡುತ್ತಿದೆ.

ಗೊಂಚಲಲ್ಲಿ ಕೊಳೆ: ರೊಬಸ್ಟಾ ಕಾಫಿ ಈ ವ್ಯಾಪ್ತಿಯಲ್ಲಿ ಹೇರಳವಾಗಿದ್ದು, ಅತಿಹೆಚ್ಚು ಹಾಗೂ ಅಕಾಲಿಕ ಮಳೆಯಿಂದಾಗಿ ರೊಬಸ್ಟಾಗೂ ಕೊಳೆರೋಗ ಬಾಧಿಸಿದೆ. ಕಾಫಿ ಗೊಂಚಲಿನಲ್ಲಿ ಕಾಫಿ ಕಾಯಿ ಕೊಳೆತು ನಿಂತಿದ್ದು, ಕಳೆ ತೆಗೆಯುವ (ಕಚ್ಚಡ) ಹಾಗೂ ಚಿಗುರು ತೆಗೆಯಲೆಂದು ಗಿಡಗಳಿಗೆ ಕೈ ಹಾಕಿದರೆ ಎಲ್ಲವೂ ಉದುರಿ ಬೀಳುತ್ತಿವೆ. ಇನ್ನೂ ಕೊಂಚ ನೆರಳು ಇರುವ ಪ್ರದೇಶಗಳಲ್ಲಂತೂ ಕಾಫಿ ಕಾಯಿಗಳು ತರಗೆಲೆಗಳಂತೆ ಉದುರುತ್ತಿರುವುದು ಕಂಡುಬರುತ್ತಿದೆ.

ಕರಿಮೆಣಸು ಇಲ್ಲ: ಈ ವ್ಯಾಪ್ತಿಯಲ್ಲಿ ಮಿಶ್ರ ಬೆಳೆಯಾಗಿ ಕರಿಮೆಣಸನ್ನೂ ಹೆಚ್ಚಾಗಿ ಬೆಳೆಯಲಾಗಿದೆ. ಇದುವರೆಗೆ ಫಸಲು ಕೂಡ ಹೆಚ್ಚಾಗಿ ಲಭಿಸುತ್ತಿದ್ದು, ಕಾಫಿಗೆ ಬೆಲೆಯಿಲ್ಲದ ಸಂದರ್ಭದಲ್ಲಿ ಮೆಣಸು ಒಂದಿಷ್ಟು ಕೈಹಿಡಿಯುತ್ತಿತ್ತು. ಆದರೀಗ ಕರಿಮೆಣಸಿಗೂ ಕರಿಛಾಯೆ ಆವರಿಸಿದೆ. ಕೆಲವೆಡೆ ಬಳ್ಳಿಗಳು ನಾಶವಾಗುತ್ತಿದ್ದು, ಇನ್ನು ಹಲವೆಡೆ ಇರುವ ಬಳ್ಳಿಗಳಲ್ಲಿ ಫಸಲು ಕೈಕೊಟ್ಟಿದೆ. ಅಲ್ಪಸ್ವಲ್ಪದ ಆದಾಯ ಕೂಡ ಇಲ್ಲದಂತಾಗಿದೆ. ತೋಟದ ನಿರ್ವಹಣೆಯ ವೆಚ್ಚ ಕೂಡ ಅಧಿಕವಾಗಿರುವುದರಿಂದ ಇದೀಗ ಎಲ್ಲಡೆ ತೋಟದ ಮಾಲೀಕರು, ಮಕ್ಕಳು ಕೂಡ ತೋಟ, ಕೃಷಿ ಕೆಲಸದಲ್ಲಿ ಭಾಗಿಯಾಗುತ್ತಿರುವುದು ಕಾಣಬರುತ್ತಿದೆ. ಮರಗೋಡುವಿನಲ್ಲಿಯೂ ಪುಟಾಣಿ ಮಕ್ಕಳು ಕೂಡ ಪೋಷಕರೊಂದಿಗೆ ಕಾಫಿ ಕುಯ್ಲು ಕೆಲಸದಲ್ಲಿ ಭಾಗಿಯಾಗಿದ್ದುದು ಗೋಚರಿಸಿತು.

ಇನ್ನು ಏಲಕ್ಕಿ ಕೆಲವರ ತೋಟಗಳಲ್ಲಿ ಮಾತ್ರ ಕಂಡುಬರುತ್ತದೆ. ಗಿಡಗಳು ಚೆನ್ನಾಗಿರುವಲ್ಲಿ ಒಂದಿಷ್ಟು ಫಸಲಿದೆ ಅಷ್ಟೇ. ಅಡಿಕೆ ಬೆಳೆದವರಿಗೆ ಒಂದಿಷ್ಟು ಫಸಲು ಸಿಗಬಹುದೇನೋ. ಆದರೆ ಅಡಿಕೆಗಿರುವ ಬೆಲೆ ಮಾತ್ರ ಅಷ್ಟಕಷ್ಟೇ. ಒಟ್ಟಿನಲ್ಲಿ ಶ್ರೀಮಂತ ಗ್ರಾಮವೆನಿಸಿಕೊಂಡಿರುವ ಮರಗೋಡುವಿನಲ್ಲೂ ಸಂಕಷ್ಟದ ಸರಮಾಲೆ ಹೆಣೆದುಕೊಂಡಿದ್ದು, ಸರಕಾರ ಬೆಳೆಗಾರರ ಸಂಕಷ್ಟ ನಿವಾರಣೆಗೆ ಮುಂದಾಗಬೇಕಿದೆ ಎಂಬದು ಬೆಳೆಗಾರರ ಅಂಬೋಣ...!