ಮಡಿಕೇರಿ, ಅ. 4: ಶ್ರಮಜೀವಿಗಳಾದ ಬೆಳೆಗಾರರು- ರೈತರು ತಮ್ಮ ಪರಿಶ್ರಮದಂತೆ ಒಂದಷ್ಟು ಯಶಸ್ಸು ಸಾಧಿಸುತ್ತಿದ್ದರು. ಆದರೆ, ಸತತ ವರ್ಷಗಳ ಮಳೆಯೊಂದಿಗೆ ಈ ಬಾರಿಯೂ ಇದು ಮರುಕಳಿಸಿದ ಪರಿಣಾಮ ಪರಮಾತ್ಮನೇ ಕಾಪಾಡಬೇಕು ಎಂದು ಪರಿತಪಿಸುವಂತಾಗಿದೆ ಎನ್ನುತ್ತಾರೆ ಬಿ.ಶೆಟ್ಟಿಗೇರಿ ಗ್ರಾ.ಪಂ. ಹಾಗೂ ಬಿಟ್ಟಂಗಾಲ ಗ್ರಾ.ಪಂ. ವಿಭಾಗದ ಜನತೆ.

ಬ್ರಹ್ಮಗಿರಿ ತಪ್ಪಲಿನಲ್ಲಿ ಬರುವ ಈ ಪ್ರದೇಶದಲ್ಲಿ 150 ಇಂಚಿಗೂ ಅಧಿಕ ಮಳೆಯಾಗಿದೆ. ಅದರಲ್ಲೂ ಆಗಸ್ಟ್‍ನಲ್ಲಿ ಕೇವಲ 10 ದಿನದಲ್ಲಿ 60 ಇಂಚಿನಷ್ಟು ಸರಾಸರಿ ಮಳೆ ಸುರಿದಿದೆ. ಎಕರೆಗೆ 40-50 ಚೀಲ ಕಾಫಿ ಪಡೆಯುತ್ತಿದ್ದ ಶ್ರಮಿಕ ಬೆಳೆಗಾರರು ಇದೀಗ 10-20 ಚೀಲ ಕುಯ್ಯುವುದು ಕೂಡ ಕಷ್ಟಕರ ಎಂಬಂತಾಗಿದೆ ಎಂದು ಬೆಳೆಗಾರರ ಪರವಾಗಿ ಕೋಲತಂಡ ರಘು ಮಾಚಯ್ಯ ಸಂಕಷ್ಟ ವಿವರಿಸಿದರು.ಕಾಫಿ ಉದುರುವಿಕೆ ಒಂದೆಡೆಯಾದರೆ, ಮರಬಿದ್ದು ಹಾನಿಯಾಗಿರುವುದು, ಕರಿಮೆಣಸು ಧರಾಶಾಹಿಯಾಗುತ್ತಿರುವುದು ಮತ್ತೊಂದೆಡೆಯಾಗಿದೆ. ಕಾಫಿ ನಷ್ಟದ ಹೊಡೆತ ನಡುವೆ ಉಪಬೆಳೆಗಳಾದ ಕರಿಮೆಣಸು, ಬಾಳೆ, ಅಡಿಕೆಯಂತಹ ಫಸಲು ಬೆಳೆದು ರೈತರು ಒಂದಷ್ಟು ಸುಧಾರಿಸಿಕೊಳ್ಳುತ್ತಿದ್ದರು. ಆದರೆ ಬಾಳೆ ಗಾಳಿಗೆ ಧರಾಶಾಹಿಯಾದರೆ, ಅಡಿಕೆ ಕೊಳೆ ರೋಗದಿಂದ ಇಲ್ಲವಾಗಿದೆ. ಏಲಕ್ಕಿ ಕೂಡ ಸಂಪೂರ್ಣ ನಾಶವಾಗಿದೆ. ಗದ್ದೆ ನೆಟ್ಟು ಊಟಕ್ಕೆ ಅಕ್ಕಿ ಬೆಳೆಯಲು ಉತ್ಸುಕತೆ ಇದ್ದರೂ, ಹವಾಮಾನದ ವೈಪರೀತ್ಯದಿಂದ ಇದೂ ಸಾಧ್ಯವಾಗುತ್ತಿಲ್ಲ. ಜತೆಗೆ ವನ್ಯ ಪ್ರಾಣಿಗಳಿಂದಲೂ ಮತ್ತೊಂದು ಹೊಡೆತ. ಪ್ರುಸ್ತುತ ಎಲ್ಲಾ ಬೆಳೆಗಳ ಖರ್ಚು ವೆಚ್ಚ ನಿರ್ವಹಣೆ ಗಮನಿಸಿದರೆ ಶೇಕಡ 300ರಷ್ಟು ಏರಿಕೆಯಾಗಿದೆ. ಆದರೆ ರೈತರಿಗೆ ಸಿಗುವುದು ಮಾತ್ರ

(ಮೊದಲ ಪುಟದಿಂದ) ಅತ್ಯಲ್ಪವಾಗಿದೆ ಎನ್ನುತ್ತಾರೆ ಅವರು.

ಸಾಲಮನ್ನಾ, ಬಡ್ಡಿಮನ್ನಾ ಒಂದು ವೇಳೆ ದೊರೆತರೂ ಅದು ರೈತರಿಗೆ ಶಾಶ್ವತವಾಗಿ ನೆರವಾಗದು. ಇದರ ಬದಲಿಗೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಂಬಲ ಬೆಲೆಯನ್ನು ಹಾಗೂ ಇತರ ಯೋಜನೆಯನ್ನು ಸರಕಾರಗಳು ನೀಡುವುದೊಂದೇ ಪರಿಹಾರವಾಗಬಹುದು ಎಂದು ರಘು ಮಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಇಂತಹ ಸಂಕಷ್ಟದ ನಡುವೆ ಸಾಲ - ಸೋಲ ಮಾಡಿ ಬದುಕು ಸಾಗಿರುತ್ತಿರುವ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಈ ಬವಣೆ ವಷರ್ಂಪ್ರತಿ ಮುಂದುವರಿಯುತ್ತಿರುವುದು ಮುಂದಿನ ಭವಿಷ್ಯದ ಬಗ್ಗೆ ಪ್ರತಿಯೊಬ್ಬರೂ ಆತಂಕಪಡುವಂತಾಗಿದೆ. ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿ ಸರಕಾರ ಈ ಬಗ್ಗೆ ಸೂಕ್ತವಾದ ಶಾಶ್ವತವಾಗಿ ಪ್ರಯೋಜನಕಾರಿಯಾಗುವ ಯೋಜನೆ ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಕೃಷಿಯ ಬಗ್ಗೆ ಎಲ್ಲರೂ ನಿರಾಸಕ್ತಿ ಹೊಂದಲಿದ್ದಾರೆ ಎಂಬುದು ಈ ವ್ಯಾಪ್ತಿಯ ರೈತರ ಅನಿಸಿಕೆಯಾಗಿದೆ.