ಸಿದ್ದಾಪುರ, ಅ. 4: ಸಾರ್ವಜನಿ ಕರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಯೊಂದನ್ನು ಸೆರೆಹಿಡಿ ಯುವಲ್ಲಿ ಅರಣ್ಯ ಇಲಾಖಾಧಿಕಾರಿ ಗಳು ಯಶಸ್ವಿಯಾಗಿದ್ದಾರೆ.ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಅಮ್ಮತ್ತಿ, ಹೊಸೂರು ಬೆಟ್ಟಗೇರಿ, ಕಳತ್ಮಾಡು, ಗೊಟ್ಟಡ ಗ್ರಾಮಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಹಿಂಡಿನ ಪೈಕಿ ತೀವ್ರ ಉಪಟಳವನ್ನು ನೀಡುತ್ತಿದ್ದ ಅಂದಾಜು 45 ವರ್ಷ ಪ್ರಾಯದ ಒಂಟಿ ಸಲಗವನ್ನು ಇಂದು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ಮೂಲಕ ಸೆರೆಹಿಡಿದು, ಚಾಮರಾಜನಗರದ ಮೂಲೆಹೊಳೆ ಶಿಬಿರಕ್ಕೆ ಸ್ಥಳಾಂತರಗೊಳಿಸಲಾಯಿತು.ಸೆರೆಹಿಡಿಯಲಾದ ಒಂಟಿ ಸಲಗವು ಹೊಸೂರು ಬೆಟ್ಟಗೇರಿ, ಕಳತ್ಮಾಡು ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು

(ಮೊದಲ ಪುಟದಿಂದ) ದಾಂಧಲೆ ನಡೆಸುತ್ತಿತ್ತು. ಕಾಡಾನೆಗಳ ಹಿಂಡಿನ ಪೈಕಿ ಸಲಗವು ಮಾನವನ ಮೇಲೆ ಕೂಡ ದಾಳಿ ನಡೆಸುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಒಂಟಿ ಸಲಗದ ಉಪಟಳದಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದರು. ಈ ಗ್ರಾಮಗಳಲ್ಲಿ ಹಾವಳಿ ತೀವ್ರವಾಗಿದ್ದು, ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದೆ. ಅಲ್ಲದೇ ಇತ್ತೀಚೆಗೆ ಈ ಭಾಗದಲ್ಲಿ ಕೃಷಿ ಮಾಡಿದ್ದ ಭತ್ತದ ಬೆಳೆಗಳನ್ನು ನಾಶಗೊಳಿಸಿದೆ.

ಈ ಪುಂಡಾನೆಯನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಅದರ ಚಲನವಲನಗಳನ್ನು ಕಂಡುಹಿಡಿಯಲು ವೀಡಿಯೋ ಚಿತ್ರಗಳನ್ನು ಸೆರೆಹಿಡಿದು ಭಾನುವಾರ ಕಾರ್ಯಾಚರಣೆ ಕೈಗೊಂಡರು. ವನ್ಯಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ಹಾಗೂ ಶೂಟರ್ ಅಕ್ರಂ ಸೇರಿದಂತೆ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಿಗ್ಗೆ 9 ಗಂಟೆಯಿಂದ ಕಾರ್ಯಾಚರಣೆ ನಡೆಸಿದರು. ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಸಲಗವು ಈ ಹಿಂದೆ ಇದ್ದ ಜಾಗದಿಂದ ಸ್ಥಳಾಂತರಗೊಂಡು ದೇವರಪುರ ಬಳಿಯ ಕಾಡಿನಲ್ಲಿ ಇತರ ಕಾಡಾನೆಗಳೊಂದಿಗೆ ಇರುವುದು ಗೋಚರಿಸಿತು.

ಕೂಡಲೇ ಡಾ. ಮುಜೀಬ್ ಹಾಗೂ ಶೂಟರ್ ಅಕ್ರಂ ಸೇರಿ ಅರವಳಿಕೆ ಚುಚ್ಚುಮದ್ದನ್ನು ಕೋವಿಯ ಮೂಲಕ ಹಾರಿಸಿದ್ದು, ಕೂಡಲೇ ಪುಂಡಾನೆಯು ಅಂದಾಜು 100 ಮೀ. ಸುತ್ತಾಡಿ ನೆಲಕ್ಕೆ ಬಿದ್ದಿದೆ. ಬಳಿಕ ಕಾಡಾನೆಗೆ ಹಗ್ಗದಿಂದ ಕಟ್ಟಿ, ಬಳಿಕ ಕಾಡಾನೆಯ ತಲೆಗೆ ನೀರು ಸುರಿಯಲಾಯಿತು. ಕಾರ್ಯಾಚರಣೆಗೆ ಮತ್ತಿಗೋಡು ಹಾಗೂ ದುಬಾರೆ ಸಾಕಾನೆ ಶಿಬಿರದ ಅರ್ಜುನ, ಗೋಪಾಲಸ್ವಾಮಿ, ಗಣೇಶ, ಹರ್ಷ, ಕೃಷ್ಣ ಸಾಥ್ ನೀಡಿದವು. ಪುಂಡಾನೆಯನ್ನು ಸೆರೆಹಿಡಿಯುವ ಸಂದರ್ಭ ಜೊತೆಗಿದ್ದ ಇತರೆ ಕಾಡಾನೆಗಳು ಅಲ್ಲಿಂದ ಪರಾರಿ ಯಾಗಿದ್ದು, ಸೆರೆಸಿಕ್ಕ ಸಲಗವನ್ನು ಸಾಕಾನೆಗಳು ಎಳೆದುಕೊಂಡು ಬಂದವು. ಈ ಸಂದರ್ಭ ರಸ್ತೆಯುದ್ದ ಕ್ಕೂ ಪುಂಡಾಟಿಕೆಯನ್ನು ಮಾಡಿದ್ದು, ಸಾಕಾನೆಗಳು ಪುಂಡಾನೆ ಯನ್ನು ಎಳೆದುತಂದು ಕ್ರೈನ್ ಮೂಲಕ ಲಾರಿಯೊಳಗೆ ಹತ್ತಿಸಿದವು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಾಲಾಲ್, ವೀರಾಜಪೇಟೆ ಡಿ.ಸಿ.ಎಫ್. ಚಕ್ರಪಾಣಿ ಮಾರ್ಗ ದರ್ಶನದಲ್ಲಿ ವೀರಾಜಪೇಟೆ ಎ.ಸಿ.ಎಫ್ ರೋಶಿಣಿ, ತಿತಿಮತಿ ಎ.ಸಿ.ಎಫ್ ಉತ್ತಪ್ಪ, ಪ್ರಬಾರ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಮನೋಜ್ ಕ್ರಿಸ್ಟೊಫರ್, ಆರ್.ಆರ್.ಟಿ ತಂಡದ ಸಿಬ್ಬಂದಿಗಳು ಸೇರಿದ್ದಂತೆ 50 ಮಂದಿ ಪಾಲ್ಗೊಂಡಿದರು.

ವರದಿ: ಎ.ಎನ್. ವಾಸು