ಕುಶಾಲನಗರ, ಅ. 4: ಕೃಷಿ ಚಟುವಟಿಕೆಗೆ ಒತ್ತು ನೀಡಿ ನಿರ್ಮಾಣ ಗೊಂಡ ಹಾರಂಗಿ ಅಣೆಕಟ್ಟೆ ಯೋಜನೆ ಇತ್ತ ಕೃಷಿಕರಿಗೆ ಗಗನ ಕುಸುಮವಾಗಿದ್ದರೆ ಇನ್ನೊಂದೆಡೆ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಯಶಸ್ಸು ಕಾಣದೆ ಯೋಜನೆ ಮಾತ್ರ ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗುತ್ತಿರು ವುದು ಇತ್ತೀಚಿನ ಬೆಳವಣಿಗೆಯಾಗಿದೆ. ಅಣೆಕಟ್ಟೆಯಲ್ಲಿ ಮಳೆಗಾಲದಲ್ಲಿ ನೀರು ತುಂಬಿಸಿ ಸಮರ್ಪಕ ನೀರಿನ ನಿರ್ವಹಣೆ ಯಾಗದೆ ಒಂದು ರೀತಿಯಲ್ಲಿ ಹಾರಂಗಿ ಜಲಾಶಯ ಕೇವಲ ಕೆರೆಕಟ್ಟೆ ಯಂತಾಗಿದೆ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಜಲಾಶಯದಿಂದ ಏಕಾಏಕಿ ಹೆಚ್ಚುವರಿ ನೀರು ಬಿಡುಗಡೆ ಯಾಗಿ ಕಾವೇರಿ ಜಲಾನಯನ ವ್ಯಾಪ್ತಿಯ ತಗ್ಗು ಪ್ರದೇಶದ ಬಡಾವಣೆಗಳು, ಕೃಷಿ ಭೂಮಿಗಳು ಜಲಾವೃತಗೊಳ್ಳುತ್ತಿ ರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಆದರೆ ಹಾರಂಗಿ ಅಣೆಕಟ್ಟೆ ಯೋಜನೆಯ ಹೆಸರಿನಲ್ಲಿ ಕಳೆದ 4 ದಶಕಗಳ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹಣ ನಿರ್ವಹಣೆ ಹೆಸರಿನಲ್ಲಿ ಬಳಕೆಯಾಗುತ್ತಿರುವುದು ಮಾತ್ರ ನಿರಂತರವಾಗಿ ಮುಂದು ವರೆದಿದೆ. ಇತ್ತ ಜಲಾಶಯದಿಂದ ಕಾಲುವೆ ಮೂಲಕ ಹರಿಯಲು ನಿರ್ಮಾಣಗೊಂಡ ಎಡದಂಡೆ ನಾಲೆಯ ಬದಿಯಲ್ಲಿರುವ ಮಣ್ಣನ್ನು ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುವ ದಂಧೆಯೊಂದು ಕಳೆದ ಕೆಲವು ಸಮಯದಿಂದ ಕಂಡು ಬಂದರೂ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಎಡೆಮಾಡಿದೆ.

ಹಾರಂಗಿ ಜಲಾಶಯದಿಂದ ಕೊಡಗಿನ ಸೋಮವಾರಪೇಟೆ, ಹಾಸನದ ಅರಕಲಗೂಡು, ಮೈಸೂರು ಜಿಲ್ಲೆಯ ಕೆಆರ್‍ನಗರ, ಪಿರಿಯಾಪಟ್ಟಣ, ಹುಣಸೂರು ವ್ಯಾಪ್ತಿಯ ಲಕ್ಷಾಂತರ ಎಕರೆ ಭೂಮಿಗೆ ನೀರೊದಗಿಸಲು ಕಾಲುವೆಗಳು ನಿರ್ಮಾಣಗೊಂಡಿವೆ. ನಿರ್ಮಾಣ ಸಂದರ್ಭ ಕಾಮಗಾರಿಯ ಮಣ್ಣನ್ನು ಎರಡೂ ಬದಿಗಳಲ್ಲಿ ತುಂಬಿ ಸಂಪರ್ಕ ರಸ್ತೆ ನಿರ್ಮಾಣಗೊಂಡಿದೆ. ಹಾಗೂ ಯಾವುದೇ ಸಂದರ್ಭ ಕಾಲುವೆ ಒಡೆಯದಂತೆ ಸಾವಿರಾರು ಲೋಡ್‍ಗಳಷ್ಟು ಮಣ್ಣು ಬದಿಯಲ್ಲಿ ತುಂಬಲಾಗಿದೆ. ಈ ಸಂದರ್ಭ ಭೂಮಿ ಕಳೆದುಕೊಂಡ ಮಾಲೀಕರಿಗೆ ಯೋಜನೆ ಮೂಲಕ ಪರಿಹಾರ ಕೂಡ ನೀಡಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಾಲುವೆಯ ಎರಡೂ ಬದಿಗಳಿಂದ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ದಂಧೆಯೊಂದು ಪ್ರಾರಂಭ ಗೊಂಡಿದ್ದು ಸಾವಿರಾರು ಲೋಡ್‍ಗಳಷ್ಟು ಮಣ್ಣನ್ನು ಹಿಟಾಚಿ, ಜೆಸಿಬಿ ಮೂಲಕ ಟಿಪ್ಪರ್‍ಗಳಿಗೆ ತುಂಬಿ ಸಮೀಪದ ರೆಸಾರ್ಟ್‍ಗಳಿಗೆ ರಸ್ತೆ ನಿರ್ಮಾಣ ಮತ್ತು ಗುಂಡಿಗಳನ್ನು ತುಂಬಲು ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಸಾಗಿಸುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದಕ್ಕೆ ಕೂಡಲೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.

ಈ ದಂಧೆಯಲ್ಲಿ ಸ್ಥಳೀಯರೂ ಸೇರಿದಂತೆ ಭಾರೀ ಪ್ರಭಾವಿಗಳು ಶಾಮೀಲಾಗಿದ್ದಾರೆ ಎನ್ನುವುದು ಇಲ್ಲಿನ ಜನರ

(ಮೊದಲ ಪುಟದಿಂದ) ಆರೋಪವಾಗಿದೆ. ಒಂದು ಲೋಡ್ ಮಣ್ಣು ಸಾಗಿಸಲು ಇಂತಿಷ್ಟು ದರ ನಿಗದಿ ಮಾಡಿದ್ದಾರೆ ಎನ್ನುವುದು ಜನರ ದೂರಾಗಿದೆ. ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮಾಹಿತಿಯಿದ್ದರೂ ದಿವ್ಯ ಮೌನಕ್ಕೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ. ಇಲ್ಲಿನ ಉಮಾಮಹೇಶ್ವರ ದೇವಾಲಯದ ಬಳಿ ಹಾರಂಗಿ ಜಲಾಶಯ ಯೋಜನೆಯ ಎಡದಂಡೆ ವಿತರಣಾ ನಾಲೆಯ ಅಚ್ಚುಕಟ್ಟು ವ್ಯಾಪ್ತಿಯ ಬದಿಯಲ್ಲಿ ಕಳೆದ ಒಂದು ವಾರದ ಹಿಂದೆ ಹಲವು ಲೋಡ್‍ಗಳಷ್ಟು ಮಣ್ಣನ್ನು ಸಾಗಿಸಿರುವುದು ಸ್ಥಳಕ್ಕೆ ಭೇಟಿ ನೀಡಿದ ‘ಶಕ್ತಿ’ಗೆ ಕಂಡುಬಂತು. ಈ ಬಗ್ಗೆ ಸ್ಥಳೀಯರಲ್ಲಿ ಪ್ರತಿಕ್ರಿಯೆ ಬಯಸಿದಾಗ ಅಲ್ಲಿನ ಯುವಕ ಗಿರೀಶ್ ಎಂಬವರು ಹೇಳಿದ್ದಿಷ್ಟು. ಎರಡು ಮೂರು ಜೆಸಿಬಿ, ಹಿಟಾಚಿಗಳು ಮತ್ತು ಟಿಪ್ಪರ್‍ಗಳು ಬಂದು ಇಲ್ಲಿಂದ ರಾಜಾರೋಷವಾಗಿ ಮಣ್ಣು ಸಾಗಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪ್ರಶ್ನಿಸಿದರೆ ಸರಿಯಾಗಿ ಉತ್ತರಿಸದೆ ದಬಾಯಿಸುತ್ತಾರೆ ಎನ್ನುವುದು ಅವರ ಅಳಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮುಖ್ಯ ನಾಲೆಯ ಕಟ್ಟೆ ಒಡೆದು ಹೋದಲ್ಲಿ ಅಪಾಯ ಸಂಭವಿಸುವುದು ನಿಶ್ಚಿತ ಎನ್ನುತ್ತಾರೆ. ಇನ್ನೊಂದೆಡೆ ಈ ಚಟುವಟಿಕೆಯಿಂದ ಉಪನಾಲೆಗಳಿಗೂ ಹಾನಿಯಾಗುವುದರೊಂದಿಗೆ ಕೃಷಿ ಚಟುವಟಿಕೆಗಳಿಗೆ ಭಾರೀ ಸಮಸ್ಯೆ ಎದುರಾಗುವುದು ನಿಶ್ಚಿತ ಎನ್ನಬಹುದು.

ಜಲಾಶಯದಿಂದ ಕಾಲುವೆ ಸಾಗುವ ಕೂಡಿಗೆ-ಸೋಮವಾರಪೇಟೆ ಮುಖ್ಯ ರಸ್ತೆಯ ಸೇತುವೆ ಬಳಿ ಗಂಧದಹಾಡಿ ಎಂಬಲ್ಲಿ ನೂರಾರು ಲೋಡ್‍ಗಳಷ್ಟು ಮಣ್ಣನ್ನು ಸಾಗಿಸಿದ್ದು ಕಂಡುಬಂದಿದೆ. ಇಲ್ಲಿ ಕಾಲುವೆಯ ಸಮೀಪದಿಂದಲೇ ಮಣ್ಣನ್ನು ತೆರವುಗೊಳಿಸಿದ್ದು ಈ ವ್ಯಾಪ್ತಿ ಯಡವನಾಡು ರಕ್ಷಿತಾರಣ್ಯಕ್ಕೆ ಸೇರಿದ್ದು ಅರಣ್ಯ ಇಲಾಖೆ ಕೂಡ ಮೌನವಹಿಸಿದೆ. ಇಲ್ಲಿ ಮಣ್ಣು ತೆರವುಗೊಳಿಸುವುದರೊಂದಿಗೆ ಬೀಟೆ, ತೇಗ ಮರಗಳನ್ನು ಕೂಡ ಬೇರು ಸಹಿತ ಕಿತ್ತು ಸಾಗಿಸಿರುವ ಕುರುಹುಗಳು ಕಾಣಬಹುದು. ಕೊರೊನಾ ಲಾಕ್‍ಡೌನ್ ಸಂದರ್ಭ ಈ ಚಟುವಟಿಕೆ ನಡೆದಿದೆ ಎಂದು ಮಾಹಿತಿ ದೊರಕಿದೆ. ಕಾಲುವೆಯ ಮಧ್ಯಭಾಗದಿಂದ ಎರಡೂ ಕಡೆಯ ಸುಮಾರು 300 ಅಡಿಗಳಷ್ಟು ವ್ಯಾಪ್ತಿ ಅಣೆಕಟ್ಟೆ ಯೋಜನೆಗೆ ಸೇರಿದ್ದರೂ ಈ ವ್ಯಾಪ್ತಿಯಲ್ಲಿ ಇಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಕಾಲುವೆಯ ಬಳಿ ನಿರ್ಮಾಣಗೊಂಡಿರುವ ಸಂಪರ್ಕ ರಸ್ತೆಗಳು ಕೂಡ ಭಾರೀ ಗಾತ್ರದ ವಾಹನಗಳು ಮಣ್ಣು ತುಂಬಿ ಓಡಾಟ ಮಾಡುತ್ತಿರುವ ಹಿನ್ನಲೆಯಲ್ಲಿ ಇಡೀ ರಸ್ತೆ ಕೆಸರುಮಯವಾಗಿದೆ. ಈ ವ್ಯಾಪ್ತಿಯ ಜನರಿಗೆ ಕೂಡ ಓಡಾಡಲು ಕಷ್ಟವಾಗಿರುವ ಪರಿಸ್ಥಿತಿ ಸೃಷ್ಠಿಯಗಿರುವುದು ಕಂಡುಬಂದಿದೆ.

ಗಂಧದಹಾಡಿಯಲ್ಲಿ ನಿರ್ಮಾಣಗೊಂಡಿರುವ ಕಾಂಕ್ರಿಟ್ ರಸ್ತೆ ಕೂಡ ಈ ದಂಧೆಕೋರರ ಕೃತ್ಯದಿಂದ ಹಾನಿಗೊಳಗಾಗಿರುವುದು ಕಾಣಬಹುದು. ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಹಾರಂಗಿ ಅಣೆಕಟ್ಟೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಅವರಲ್ಲಿ ಶಕ್ತಿ ಪ್ರತಿಕ್ರಿಯೆ ಬಯಸಿದಾಗ, ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಕಾಲುವೆಯ ಎರಡೂ ಭಾಗದಲ್ಲಿ ಇರುವ ಮಣ್ಣನ್ನು ತೆರವುಗೊಳಿಸುವುದು ನಿಯಮಬಾಹಿರವಾಗಿದ್ದು ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಣೆಕಟ್ಟೆಯಿಂದ 14 ಕಿಮೀ ದೂರದ ತನಕ ಕಾಲುವೆಯ ಎರಡೂ ಭಾಗಗಳ ಸರ್ವೆ ಕಾರ್ಯ ನಡೆದಿದೆ. ಈ ಪ್ರದೇಶವನ್ನು ಯೋಜನಾ ಪ್ರದೇಶವಾಗಿ ಬಳಸಲು ಇಲಾಖೆ ನಿರ್ಧರಿಸಿದ್ದು ಕ್ರಮಕೈಗೊಳ್ಳಲಾಗುವುದು ಎಂದು ಹಾರಂಗಿ ಅಣೆಕಟ್ಟೆ ಉಸ್ತುವಾರಿ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದ್ದಾರೆ.

ಈ ಅಕ್ರಮ ಮಣ್ಣು ಸಾಗಾಟ ದಂಧೆಯಲ್ಲಿ ಲಕ್ಷಾಂತರ ರೂ.ಗಳ ಹಣ ಕೈಬದಲಾಗುತ್ತಿರುವುದು ಗಮನಕ್ಕೆ ಬಂದಿದ್ದು ಇಲಾಖೆ ಮೂಲಕ ಗಮನಹರಿಸಿ ಮಣ್ಣು ಸಾಗಾಟಕ್ಕೆ ಕಡಿವಾಣ ಹಾಕುವುದರೊಂದಿಗೆ ಕೂಡಲೇ ದಂಧೆಕೋರರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವರದಿ-ಚಂದ್ರಮೋಹನ್