ಮುಳ್ಳೂರು, ಅ. 5: ಲಾಕ್‍ಡೌನ್ ಜಾರಿಯಾದಾಗಿನಿಂದ ಸಕಲೇಶಪುರ ದಿಂದ ಕೊಡ್ಲಿಪೇಟೆ-ಸೋಮವಾರ ಪೇಟೆ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತು.

ಈ ಸಂಬಂಧ ಪ್ರಯಾಣಿಕರ ಪರವಾಗಿ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಹರೀಶ್ ಸ್ಥಗಿತಗೊಂಡಿದ್ದ ಬಸ್ ಸಂಚಾರವನ್ನು ಮತ್ತೆ ಪ್ರಾರಂಭಿಸುವಂತೆ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಮಂಗಳೂರು ಡಿಪೊ ವ್ಯವಸ್ಥಾಪಕ ದಿವಾಕರ್ ಅವರುಗಳಿಗೆ ಮನವಿ ನೀಡಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕ ಮತ್ತು ಡಿಪೋ ಅಧಿಕಾರಿ ಸ್ಥಗಿತಗೊಂಡಿದ್ದ ಬಸ್ ಸಂಚಾರವನ್ನು ಮತ್ತೆ ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದೀಗ ಈ ಬಸ್ ಮಂಗಳೂರಿನಿಂದ ಮಧ್ಯಾಹ್ನ 1-15 ಗಂಟೆಗೆ ಹೊರಟು ಬಿ.ಸಿ.ರೋಡ್, ಉಪ್ಪಿನಂಗಡಿ, ಗುಂಡ್ಯ ಮಾರ್ಗವಾಗಿ ಸಕಲೇಶಪುರಕ್ಕೆ ಸಂಜೆ 4-50 ತಲುಪುತ್ತದೆ. ಬಾಳುಪೇಟೆ ಮಾರ್ಗವಾಗಿ ಕೊಡ್ಲಿಪೇಟೆಗೆ ಸಂಜೆ 6-10ಕ್ಕೆ ಬಂದು ತಲುಪುವ ಈ ಬಸ್ಸು ಶನಿವಾರಸಂತೆ ಮಾರ್ಗವಾಗಿ ರಾತ್ರಿ 7-30 ಗಂಟೆಗೆ ಸೋಮವಾರಪೇಟೆ ತಲುಪುತ್ತದೆ. ಮರುದಿನ ಮುಂಜಾನೆ 6 ಗಂಟೆಗೆ ಹೊರಡುವ ಬಸ್ಸು ಇದೇ ಮಾರ್ಗವಾಗಿ ಮಂಗಳೂರನ್ನು ಬೆಳಿಗ್ಗೆ 11-30 ಗಂಟೆಗೆ ತಲುಪುತ್ತದೆ.