ವೀರಾಜಪೇಟೆ, ಅ. 4: ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣ ಸಂಬಂಧ ಉತ್ತರ ಪ್ರದೇಶ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವಂತೆ ಆಗ್ರಹಿಸಿ ತಾಲೂಕು ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಹಾಗೂ ಅಂಬೇಡ್ಕರ್ ವಾದದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆ ವತಿಯಿಂದ ಇಲ್ಲಿನ ತಾಲೂಕು ಕಚೇರಿ ಮುಂದೆ ತಾ. 7 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಪಡಿಕ್ಕಲ್ ಕುಸುಮಾವತಿ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಂಬೇಡ್ಕರ್ ವಾದದ ಕರ್ನಾಟಕ ಡಿ.ಎಸ್.ಎಸ್.ನ ತಾಲೂಕು ಸಮಿತಿಯ ಎಚ್.ಆರ್. ಶಿವಣ್ಣ ಮಾತನಾಡಿ ತಾ. 7ರ ಪ್ರತಿಭಟನೆಗೆ ಇತರ ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ರೈತ ವೇದಿಕೆಯ ಕಾರ್ಯದರ್ಶಿ ಮಾಚಿಮಾಡ ವಾಣಿ, ಸಮಾಜ ಸೇವಕಿ ರುಬೀನಾ ಶಮಿವುಲ್ಲಾ, ಎಚ್.ಕೆ. ಗೋಪಾಲ್ ಉಪಸ್ಥಿತರಿದ್ದರು.

ಡಿ.ಎಸ್.ಎಸ್. ಧರಣಿ

ಇದೇ ಪ್ರಕರಣ ಸಂಬಂಧ ತಾ. 7 ರಂದು ವೀರಾಜಪೇಟೆ ತಾಲೂಕು ಕಚೇರಿ ಮುಂದೆ ಬೆಳಿಗ್ಗೆ 10.30 ಗಂಟೆಯಿಂದ ಸಂಜೆ 4 ಗಂಟೆವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಆರ್. ಪರಶುರಾಮ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗೋಷ್ಠಿಯಲ್ಲಿ ವಿಭಾಗೀಯ ಸಮಿತಿಯ ಎಚ್.ಎಸ್. ಕೃಷ್ಣಪ್ಪ, ತಾಲೂಕು ಸಂಘಟಕ ಗಣೇಶ್ ಹಾಗೂ ಸಿ.ಪಿ.ಐ. ಪಕ್ಷದ ಪಿ.ವೈ. ಷಂಶುದ್ದೀನ್ ಉಪಸ್ಥಿತರಿದ್ದರು.