ಭಾಗಮಂಡಲ, ಅ. 5: ಭಾಗಮಂಡಲ ಸಂಗಮ ಬಳಿ ದೇವಾಲಯ ಸಮಿತಿಗೆ ಸೇರಿದ ಜಾಗ ಹಾಗೂ ಪೈಸಾರಿ ಜಾಗಕ್ಕೆ ವ್ಯಕ್ತಿಯೊಬ್ಬರು ಹಾಕಿದ್ದ ಬೇಲಿಯನ್ನು ಕಂದಾಯ ಅಧಿಕಾರಿಗಳು, ದೇವಾಲಯ ಸಮಿತಿ ಹಾಗೂ ಪಂಚಾಯಿತಿಯವರ ಸಮ್ಮುಖದಲ್ಲಿ ತೆರವುಗೊಳಿಸಿದರು.
ಸ.ನಂ.46/1ರಲ್ಲಿ ನಿಡ್ಯಮಲೆ ಮಾಧವ ಎಂಬವರಿಗೆ ಈ ಹಿಂದೆ ಜಾಗ ಮಂಜೂರಾಗಿದೆ. ಆದರೆ ಅವರು ತಮ್ಮ ಜಾಗದ ಬಳಿಯಿರುವ ಸರ್ವೆ ನಂ. 47ರಲ್ಲಿ ಭಾಗಮಂಡಲ ದೇವಾಲಯಕ್ಕೆ ಸೇರಿದ ಜಾಗಕ್ಕೆ ಹಾಗೂ ಸಮೀಪದ ಪೈಸಾರಿ ಜಾಗಕ್ಕೂ ತಂತಿಬೇಲಿ ಹಾಕಿ ಒತ್ತುವರಿ ಮಾಡಿಕೊಂಡಿದ್ದರು. ಆ ಒತ್ತುವರಿಯನ್ನು ಇಂದು ತೆರವು ಮಾಡಲಾಯಿತು ಎಂದು ತಹಶೀಲ್ದಾರ್ ಮಹೇಶ್ ತಿಳಿಸಿದ್ದಾರೆ. ಈ ಸಂದರ್ಭ ಕಂದಾಯ ನಿರೀಕ್ಷಕ ಸದಾಶಿವ ಮತ್ತಿತರರಿದ್ದರು.