ಮಡಿಕೇರಿ, ಅ. 5 : ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ, ಜೆಡಿಎಸ್ ಅಲ್ಪಸಂಖ್ಯಾತರ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್‍ಖಾನ್, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ ಆ ಯೋಜನೆಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಮಹಾಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷ ಗಳಿಂದ ನಿರಂತರವಾಗಿ ಭೂ ಕುಸಿತ ಉಂಟಾಗಿದ್ದು, ಅಲ್ಪಸಂಖ್ಯಾತರು ಕೂಡ ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಆದರೆ ಸರ್ಕಾರ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಮನೆ ಹಾಗೂ ಪರಿಹಾರದ ಹಣ ನೀಡದೆ ಸಂಕಷ್ಟಕ್ಕೆ ದೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರ ನೀಡಿರುವ ಯೋಜನೆಯ ಗುರಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ ಇಸಾಕ್ ಖಾನ್, ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ಮನೋಭಾವವನ್ನು ಮುಂದುವರೆಸಿದರೆ ಅಲ್ಪಸಂಖ್ಯಾತ ರೆಲ್ಲರೂ ಬೀದಿಗಿಳಿದು ಪ್ರತಿಭಟನೆ ಯನ್ನು ಮತ್ತಷ್ಟು ತೀವ್ರಗೊಳಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಶೇಷಚೇತನರಿಗೆ ಸಂಕಷ್ಟ
ವಿಶೇಷ ಚೇತನರ ಪರವಾಗಿ ಮಾತನಾಡಿದ ಪೋಷಕ ಆಲಿ ದೂರದ ಊರುಗಳಿಂದ ವಿಶೇಷಚೇತ ನರು ನಿಗಮದ ಕಚೇರಿಗೆ ಪ್ರತಿದಿನ ಆಗಮಿಸಿದರೂ ಯೋಜನೆಗಳು ಕೈಸೇರುತ್ತಿಲ್ಲ ಎಂದು ಟೀಕಿಸಿದರು. ವಿಶೇಷಚೇತನರಿಗಾಗಿ ನೀಡಲಾಗುವ ಮಾಸಾಶನವನ್ನೇ ಸ್ಥಗಿತಗೊಳಿಸಲಾ ಗಿದ್ದು, ಕಳೆದ ಹಲವು ತಿಂಗಳುಗಳಿಂದ ವೇತನ ನೀಡಿಲ್ಲ. ವಿಶೇಷಚೇತನರ ಸಂಕಷ್ಟದ ಬಗ್ಗೆಯೂ ಸರ್ಕಾರಕ್ಕೆ ಕರುಣೆ ಇಲ್ಲವೆಂದು ಆರೋಪಿಸಿದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಯೂಸುಫ್, ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ಮಡಿಕೇರಿ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಶೀರ್, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಬಾದ್‍ಶಾ, ವಿರಾಜಪೇಟೆ ಅಲ್ಪಸಂಖ್ಯಾತ ಅಧ್ಯಕ್ಷ ಮಜೀದ್, ಮಹಿಳಾಧ್ಯಕ್ಷೆ ರುಬೀನಾ ಬಾನು, ಕುಶಾಲನಗರ ತಾಲೂಕು ಅಧ್ಯಕ್ಷ ಕರೀಂ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎ. ರುಬೀನಾ, ಕುಶಾಲನಗರ ಪ. ಪಂ. ಸದಸ್ಯ ಸಬ್ಬಿರ್, ಮೂರ್ನಾಡು ಗ್ರಾ.ಪಂ. ಮಾಜಿ ಸದಸ್ಯ ಸಾದಿಕ್, ಮಡಿಕೇರಿ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಮಹಿಳಾ ಘಟಕದ ನಗರಾಧ್ಯಕ್ಷೆ ಸುನಂದ, ಸಾಮಾಜಿಕ ಜಾಲತಾಣದ ಸಂಚಾಲಕ ಸೈಪುದ್ದೀನ್, ಸೋಮವಾರಪೇಟೆ ಸಂಘಟನಾ ಕಾರ್ಯದರ್ಶಿ ಆಸೀಪ್ ಮತ್ತಿತತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.